ಬ್ಯಾಡರಹಳ್ಳಿಯ ಬಿ.ಇ.ಎಲ್ ಲೇಔಟ್‌ನಲ್ಲಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಸಿಸಿಟಿವಿ ಚೆಕ್ ಮಾಡುವ ನೆಪದಲ್ಲಿ ನುಗ್ಗಿದ್ದನು. ನಂತರ ತನ್ನ ಸಹಚರನನ್ನು ಕರೆಸಿಕೊಂಡು, ದಂಪತಿಗಳ ಕೈಕಾಲು ಕಟ್ಟಿ ಹಾಕಿ ಚಾಕು ತೋರಿಸಿ ಬೆದರಿಸಿದ್ದರು. ಮನೆಯಲ್ಲಿದ್ದ 677 ಗ್ರಾಂ ಚಿನ್ನಾಭರಣ, 20 ಲಕ್ಷ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ತನಿಖೆಯನ್ನು ಶುರು ಮಾಡಿದಾಗ ಪ್ರಕರಣದ ಪ್ರಮುಖ ಆರೋಪಿಯು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿ ಬಂದು ಈ ಕೃತ್ಯ ಎಸಗಿದ್ದನು ಎಂದು ತಿಳಿದುಬಂದಿದೆ. ನಾಲ್ಕೇ ದಿನದಲ್ಲಿ ಆರೋಪಿಯನ್ನು ಜೈಲಿನಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರು ಸಹಚರರ ಮಾಹಿತಿ ಲಭ್ಯವಾಯಿತು.
ಪೊಲೀಸರು ಶಿವಮೊಗ್ಗ ಮತ್ತು ಆರ್.ಆರ್ ನಗರದ ನಿವಾಸಗಳಿಂದ ಒಟ್ಟು 429 ಗ್ರಾಂ ಚಿನ್ನಾಭರಣ ಮತ್ತು 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಸಹಚರರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯನ್ನು ಡಿಸಿಪಿ ಶ್ರೀ.ನಾಗೇಶ್ ಡಿ ಎಲ್ ಮತ್ತು ಎಸಿಪಿ ಶ್ರೀ. ಅಶೋಕ್ ಎಂ ಎಸ್ ಅವರ ಮಾರ್ಗದರ್ಶನದಲ್ಲಿ ಬ್ಯಾಡರಹಳ್ಳಿ ಇನ್ಸ್‌ಪೆಕ್ಟರ್ ಶ್ರೀ. ಭಾಸ್ಕರ್ ಸಿ ಹಾಗೂ ತಂಡದವರು ಯಶಸ್ವಿಯಾಗಿ ನಡೆಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್
