ಬೆಂಗಳೂರು: ಸದಾ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ನೇರವಾಗಿ ಧ್ವನಿ ಎತ್ತುವ ನಟ ಕಿಶೋರ್ ಕುಮಾರ್ ಜಿ. ಅವರು ಈಗ ರಾಮನ ಕುರಿತು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಮಾಯಣವು ಕೇವಲ ಒಂದು ಕಾವ್ಯವಲ್ಲ, ಅದು ಭಾರತದ ಸಾಂಸ್ಕೃತಿಕ ಅಸ್ಮಿತೆಯ ಪ್ರತಿಬಿಂಬ ಎಂದು ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ವಾಲ್ಮೀಕಿಯಿಂದ ಹಿಡಿದು ಕಂಬನ್ ಮತ್ತು ಆದಿಕವಿ ಪಂಪನವರೆಗೆ ಪ್ರತಿಯೊಬ್ಬ ಕವಿಯೂ ತಮ್ಮದೇ ಆದ ದೃಷ್ಟಿಕೋನದಲ್ಲಿ ರಾಮನನ್ನು ಚಿತ್ರಿಸಿದ್ದಾರೆ. ಆದರೆ ಇಂದಿನ ತಾರ್ಕಿಕ ಮತ್ತು ಮಾನವೀಯ ಕಾಲಘಟ್ಟದಲ್ಲಿ “ನನ್ನ ರಾಮ ಯಾರು?” ಎಂಬ ಪ್ರಶ್ನೆಗೆ ಅವರು ಉತ್ತರ ಹುಡುಕಿದ್ದಾರೆ.
ವಾಲಿಯನ್ನು ಮರೆಯಿಂದ ಕೊಂದ ಹಾಗೂ ಶಂಭೂಕನ ತಪಸ್ಸನ್ನು ನಿಗ್ರಹಿಸಿದ ಹಳೆಯ ವ್ಯವಸ್ಥೆಯ ಪರ ನಿಂತ ರಾಮನಿಗಿಂತ ಭಿನ್ನವಾದ ರಾಮನ ಅವಶ್ಯಕತೆ ಇಂದಿನ ಸಮಾಜಕ್ಕೆ ಇದೆ ಎಂದು ಅವರು ಹೇಳಿದ್ದಾರೆ. ಪುರಾಣದ ರಾಮನಿಗಿಂತ ನ್ಯಾಯದ ಪರ ನಿಲ್ಲುವ ರಾಮನೇ ಶ್ರೇಷ್ಠ ಎಂಬುದು ಅವರ ವಾದ.
ನನ್ನ ರಾಮ ಅನ್ಯಾಯವನ್ನು ಪ್ರಶ್ನಿಸುವ, ಸೀತೆಯ ಮೌನವನ್ನು ಅರ್ಥೈಸುವ ಹಾಗೂ ಸಮಾನತೆ ಮತ್ತು ನ್ಯಾಯದ ಜಗತ್ತನ್ನು ಬಯಸುವ ವ್ಯಕ್ತಿತ್ವ” ಎಂದು ಕಿಶೋರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಬರಹವು ಪುರಾಣದ ಪಾತ್ರಗಳನ್ನು ಮರುಚಿಂತನೆಗೆ ಒಳಪಡಿಸುವ ನಿಟ್ಟಿನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.