Share News

ಚನ್ನಪಟ್ಟಣ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಅತ್ಯಂತ ಗಂಭೀರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ರಾಮನಗರದ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

​ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ ಗ್ರಾಮದ ನಿವಾಸಿ ನಾಗೇಂದ್ರ ಬಿನ್ ದಾಸೇಗೌಡ (ಆರೋಪಿ) ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾನೆ.

ದಿನಾಂಕ 26.12.2021 ರಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಳೂರುಪಟ್ಟಣ ಗ್ರಾಮದಲ್ಲಿ ಆರೋಪಿ ನಾಗೇಂದ್ರ, ದೂರುದಾರರ ಮಗನಾದ 7 ವರ್ಷದ ಕಡು ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದನು. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 377 (ಅನೈಸರ್ಗಿಕ ಲೈಂಗಿಕ ದೌರ್ಜನ್ಯ) ಹಾಗೂ ಫೋಕ್ಸೊ ಕಾಯ್ದೆ (POCSO Act) ಕಲಂ 4, 6, 8 ರ ಅಡಿಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಅಂದಿನ ತನಿಖಾಧಿಕಾರಿಯಾಗಿದ್ದ ಚನ್ನಪಟ್ಟಣ ಗ್ರಾಮಾಂತರ ವೃತ್ತದ ಸಿಪಿಐ (CPI) ಶಿವಕುಮಾರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಘಟನೆಗೆ ಸಂಬಂಧಿಸಿದಂತೆ ಸಕಲ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು. ತನಿಖೆಯನ್ನು ಪೂರ್ಣಗೊಳಿಸಿ ಆರೋಪಿ ನಾಗೇಂದ್ರನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (Charge Sheet) ಸಲ್ಲಿಸಿದ್ದರು.

ರಾಮನಗರದ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ (SPL No: 40/2022) ವಿಚಾರಣೆ ನಡೆಯುತ್ತಿತ್ತು. ಉಭಯ ಪಕ್ಷಗಳ ವಾದ-ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಎಂ. ಪಂಚಾಕ್ಷರಿ ಅವರು, ಅಪರಾಧಿ ನಾಗೇಂದ್ರನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 20 ವರ್ಷಗಳ ಸಜಾ ಶಿಕ್ಷೆ ಹಾಗೂ ₹10,000/- ದಂಡ ವಿಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

​ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಶ್ರೀಮತಿ ಮೀನಾ ಕುಮಾರಿ ಎನ್. ಅವರು ಬಲಿಷ್ಠವಾಗಿ ವಾದ ಮಂಡಿಸಿದ್ದರು. ತನಿಖಾಧಿಕಾರಿಯಾದ ಶಿವಕುಮಾರ್ ಅವರೊಂದಿಗೆ ಬಿ.ಕೆ. ಪ್ರಕಾಶ್ (PSI), ತನಿಖಾಧಿಕಾರಿ ಮನೋಹರ್ ಹಾಗೂ ಸಿಬ್ಬಂದಿಗಳಾದ ನಾಗಯ್ಯ ಹಿರೇಮಠ (CPC), ವೀರೇಶ್ ಗಂಡ್ಲುಮನಿ ಅವರುಗಳು ನಿರಂತರವಾಗಿ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ನಡೆಸಿದ್ದರು. ಸಾಕ್ಷಿದಾರರನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವಲ್ಲಿ ಚನ್ನಪಟ್ಟಣ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ತಂಡ ಯಶಸ್ವಿಯಾಗಿದೆ.

​ಪೊಲೀಸರ ಈ ಶ್ಲಾಘನೀಯ ಕಾರ್ಯಕ್ಕೆ ಮತ್ತು ನ್ಯಾಯಾಲಯದ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

​ವರದಿ: ಗಿಲ್ಬರ್ಟ್. ಜೆ

 


Share News