ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು ನಡೆಸಿದ ಎರಡು ಪ್ರಮುಖ ಕಾರ್ಯಾಚರಣೆಗಳ ವಿವರಗಳು ಬೆಚ್ಚಿಬೀಳಿಸುವ ಸತ್ಯಗಳನ್ನು ಅನಾವರಣಗೊಳಿಸಿದೆ. ಕೆಲಸದಾಕೆಯಿಂದ ಕಳ್ಳತನ ಮತ್ತು ವಿಶೇಷ ಕಾರ್ಯಚರಣೆಯಲ್ಲಿ 321 ಮೊಬೈಲ್ ಫೋನ್ ಗಳ ಪತ್ತೆ ಕಾರ್ಯ ನಡೆದಿದೆ.
ಕೋರಮಂಗಲದ ಜಕ್ಕಸಂದ್ರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ದೂರುದಾರರು ಕುಟುಂಬದೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ಮನೆಯಲ್ಲಿ ಕಳವು ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದರು. ಆರೋಪಿಯ ಮಾಹಿತಿಯಂತೆ ಆತನ ಸ್ನೇಹಿತನ ಮನೆಯಲ್ಲಿದ್ದ 172 ಗ್ರಾಂ ವಜ್ರ, ಚಿನ್ನಾಭರಣಗಳು ಹಾಗೂ 48,000 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 25 ಲಕ್ಷ ಆಗಿದೆ.
ಡಿಸಿಪಿ ಶ್ರೀ. ಮೊಹಮ್ಮದ್ ಸುಜೀತ ಎಂ ಎಸ್ ಮತ್ತು ಎಸಿಪಿ ಶ್ರೀ. ವಾಸುದೇವ್ ವಿ ಕೆ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶ್ರೀ. ಎಸ್ ಎಲ್ ಆರ್ ರೆಡ್ಡಿ ಹಾಗೂ ತಂಡ ಈ ಪ್ರಕರಣವನ್ನು ಭೇದಿಸಿದೆ.
ಇನ್ನೊಂದೆಡೆ ಆಗ್ನೇಯ ವಿಭಾಗದ ಪೊಲೀಸರು ಮಾರ್ಚ್ ಮಾಹೆಯಲ್ಲಿ ಸಿ.ಇ.ಐ.ಆರ್ (CEIR) ತಂತ್ರಾಂಶ ಬಳಸಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ವಿವಿಧ ಕಂಪನಿಯ ಒಟ್ಟು 321 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು 49,30,000 ಆಗಿದೆ. ಅತಿ ಹೆಚ್ಚು ಮೊಬೈಲ್‌ಗಳನ್ನು ಮೈಕೋ ಲೇಔಟ್ (65), ಬೊಮ್ಮನಹಳ್ಳಿ (49) ಮತ್ತು ಮಡಿವಾಳ (49) ಠಾಣಾ ವ್ಯಾಪ್ತಿಯಲ್ಲಿ ಪತ್ತೆಹಚ್ಚಲಾಗಿದೆ. ಈ ಪತ್ತೆಯಾದ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್