Subscribe Now
Trending News

Blog Post

ಮದ್ಯದ ಅಮಲಿನಲ್ಲಿ ಮಾನವೀಯತೆ ಮರೆತ ತಾಯಿ: ಕುಡಿಯಲು ಹಣವಿಲ್ಲದೆ ವಾರದ ಕಂದನನ್ನೇ ಮಾರಿದ ಕಿರಾತಕಿ!
ಕ್ರೈಂ ಸುದ್ದಿಗಳು

ಮದ್ಯದ ಅಮಲಿನಲ್ಲಿ ಮಾನವೀಯತೆ ಮರೆತ ತಾಯಿ: ಕುಡಿಯಲು ಹಣವಿಲ್ಲದೆ ವಾರದ ಕಂದನನ್ನೇ ಮಾರಿದ ಕಿರಾತಕಿ! 

ಮೆದಕ್ (ತೆಲಂಗಾಣ): ತಾಯಿಯೊಬ್ಬಳು ತನ್ನ ಮದ್ಯಪಾನದ ಚಟಕ್ಕಾಗಿ ಹೆತ್ತ ಕರುಳನ್ನೇ ಕಡಿದುಕೊಂಡ ಘೋರ ಘಟನೆಯೊಂದು ತೆಲಂಗಾಣದ ಹವೇಲಿ ಘನಪುರ ಮಂಡಲದಲ್ಲಿ ಬೆಳಕಿಗೆ ಬಂದಿದೆ. ಕುಡಿಯಲು ಹಣವಿಲ್ಲದ ಕಾರಣಕ್ಕೆ ಒಂದು ವಾರದ ಗಂಡು ಮಗುವನ್ನು ಬರೋಬ್ಬರಿ 1.70 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಲಿಂಗಸಾನಿಪಲ್ಲಿ ತಾಂಡಾದ ನಿವಾಸಿ ಮಂಜುಳಾ ಎಂಬಾಕೆ ಮಹಿಪಾಲ್ ಎಂಬುವವನೊಂದಿಗೆ ಸಹಜೀವನ ನಡೆಸುತ್ತಿದ್ದಳು. ಫೆಬ್ರವರಿ 10 ರಂದು ಮೆದಕ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಈಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಮದ್ಯಕ್ಕೆ ತೀವ್ರವಾಗಿ ದಾಸಿಯಾಗಿದ್ದ ಈ ಜೋಡಿಗೆ ಕುಡಿಯಲು ಹಣದ ಸಂಕಷ್ಟ ಎದುರಾಗಿತ್ತು. ಈ ಕಾರಣಕ್ಕಾಗಿಯೇ ಕೇವಲ ಏಳು ದಿನದ ಮಗುವನ್ನು ಕಾಮಾರೆಡ್ಡಿ ಜಿಲ್ಲೆಯ ದಂಪತಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿ ಅಮಾನವೀಯತೆ ಮೆರೆದಿದ್ದಾರೆ.

ಸರ್ಕಾರದಿಂದ ಬಾಣಂತಿಯರಿಗೆ ನೀಡಲಾಗುವ ಪೌಷ್ಟಿಕ ಆಹಾರ ಮತ್ತು ಮೊಟ್ಟೆಯನ್ನು ಪಡೆಯಲು ಮಂಜುಳಾ ಅಂಗನವಾಡಿಗೆ ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆ ಮಂಜುಳಾಳ ಮನೆಗೆ ಭೇಟಿ ನೀಡಿದಾಗ ಮಗು ನಾಪತ್ತೆಯಾಗಿರುವುದು ಕಂಡುಬಂದಿದೆ. ಕೂಡಲೇ ಕಾರ್ಯಕರ್ತೆಯು ಐಸಿಡಿಎಸ್ (ICDS) ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಮಗು ಮಾರಾಟ ಮಾಡಿರುವುದು ದೃಢಪಟ್ಟಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದು, ಮದ್ಯ ವ್ಯಸನವು ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವರದಿ :- ಆಂಟೋನಿ ಪತ್ರಕರ್ತ

Related posts

Leave a Reply

Required fields are marked *