Share News

ಬೆಂಗಳೂರು: ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌತಮ್ ಕಟ್ಟರ್ ಎಂಬುವವರು ಸಂತ ಫ್ರಾನ್ಸಿಸ್ ಜೇವಿಯರ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯು ಸಮಸ್ತ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 2026 ರಲ್ಲಿ ಗೋವಾದ ವಾಸ್ಕೋದಲ್ಲಿ ನಡೆದ ಭಗವಾನ್ ಪರಶುರಾಮ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೌತಮ್ ಕಟ್ಟರ್, ಗೋವಾದ ರಕ್ಷಕ ಸಂತ (Patron Saint) ಎಂದೇ ಗೌರವಿಸಲ್ಪಡುವ ಸೇಂಟ್ ಫ್ರಾನ್ಸಿಸ್ ಜೇವಿಯರ್ ಅವರನ್ನು ‘ಉಗ್ರಗಾಮಿ’ ಎಂದು ಕರೆದಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಗೋವಾ ಸೇರಿದಂತೆ ದೇಶದ ವಿವಿಧೆಡೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ಟ್ಯಾನಿ ಪಿಂಟೋ ಅವರು, “ಭಾರತ ಮತ್ತು ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಶಾಂತಿ ಮತ್ತು ಧರ್ಮ ಪ್ರಚಾರ ಮಾಡಿದ ಮಹಾನ್ ಮಿಷನರಿ ಸಂತ ಫ್ರಾನ್ಸಿಸ್ ಜೇವಿಯರ್. ಅವರನ್ನು ಅವಮಾನಿಸುವುದು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂಚಾಗಿದೆ. ಇಂತಹ ಹೇಳಿಕೆಗಳು ಕ್ರೈಸ್ತ ಸಮುದಾಯಕ್ಕೆ ಅತೀವ ದುಃಖವನ್ನು ತಂದಿವೆ,” ಎಂದು ಕಿಡಿಕಾರಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಗೌತಮ್ ಕಟ್ಟರ್ ವಿರುದ್ಧ ಗೋವಾ ಸರ್ಕಾರ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಾರ್ವಜನಿಕವಾಗಿ ಇಡೀ ಕ್ರೈಸ್ತ ಸಮುದಾಯದ ಕ್ಷಮೆಯಾಚಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.

ಈಗಾಗಲೇ ಈ ವಿಚಾರವಾಗಿ ಗೋವಾದಲ್ಲಿ ಕಾಂಗ್ರೆಸ್ ನಾಯಕ ಯೂರಿ ಅಲೆಮಾವೊ ಹಾಗೂ ಎಎಪಿ ಅಧ್ಯಕ್ಷ ವಾಲ್ಮೀಕಿ ನಾಯಕ್ ಸೇರಿದಂತೆ ಹಲವು ಗಣ್ಯರು ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗೋವಾ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದ್ದು, ವಿವಾದದ ಕಿಚ್ಚು ಹಬ್ಬುತ್ತಿದೆ.

​ಸಂತ ಫ್ರಾನ್ಸಿಸ್ ಜೇವಿಯರ್ ಅವರನ್ನು ಗೋವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಐಕಾನ್ ಎಂದು ಪರಿಗಣಿಸಲಾಗುತ್ತಿದ್ದು, ಇಂತಹ ಹೇಳಿಕೆಗಳು ಶಾಂತಿಪ್ರಿಯ ಗೋವಾ ಜನರಲ್ಲಿ ಅಸಮಾಧಾನ ಮೂಡಿಸಿವೆ.


Share News