Share News

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದ ಆರಂಭದಲ್ಲೇ ದಾರುಣ ಘಟನೆಯೊಂದು ಸಂಭವಿಸಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

​೫೩ ವರ್ಷದ ಶಿವಬೋರಯ್ಯ ಮೃತಪಟ್ಟ ದುರ್ದೈವಿ ಆಟೋ ಚಾಲಕ. ಇತ್ತೀಚೆಗಷ್ಟೇ ಮಗಳನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ಈ ಕುಟುಂಬಕ್ಕೆ ಇದೀಗ ಇಡೀ ಸಂಸಾರಕ್ಕೆ ಆಸರೆಯಾಗಿದ್ದ ಯಜಮಾನನೇ ದೂರವಾಗಿರುವುದು ಆಘಾತವನ್ನುಂಟು ಮಾಡಿದೆ. ಮೃತರಿಗೆ ಪತ್ನಿ, ಒಬ್ಬ ಮಗ ಹಾಗೂ ವಯಸ್ಸಾದ ತಾಯಿ ಇದ್ದಾರೆ.

ಶಿವಬೋರಯ್ಯ ಅವರು ಎಂದಿನಂತೆ ತಮ್ಮ ಆಟೋದಲ್ಲಿ ಪತ್ನಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ಬಿಟ್ಟು ಹೊರಗೆ ಬಂದಿದ್ದಾರೆ. ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದಾಗ ತೀವ್ರ ಮೂತ್ರ ವಿಸರ್ಜನೆಯ ಅವಸರವಾಗಿದೆ. ಆಗಷ್ಟೇ ಮಳೆ ಬಂದು ನಿಂತಿದ್ದರಿಂದ ವಾತಾವರಣದಲ್ಲಿ ತೀವ್ರ ಚಳಿ ಇತ್ತು. ಹೀಗಾಗಿ ಅವರು ಆಟೋ ನಿಲ್ಲಿಸಿ, ಪಕ್ಕದಲ್ಲಿದ್ದ ಕಾಂಪೌಂಡ್ ಗೋಡೆಯೊಂದರ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಆದರೆ, ದುರಾದೃಷ್ಟವಶಾತ್ ಅದೇ ವೇಳೆ ಮಳೆಗೆ ಸಂಪೂರ್ಣ ನೆನೆದು ಜರ್ಜರಿತವಾಗಿದ್ದ ಕಾಂಪೌಂಡ್ ಗೋಡೆ ದಿಢೀರನೆ ಅವರ ಮೇಲೆಯೇ ಕುಸಿದು ಬಿದ್ದಿದೆ. ಪರಿಣಾಮ ಶಿವಬೋರಯ್ಯ ಅವರು ತೀವ್ರವಾಗಿ ಗಾಯಗೊಂಡು ಇಹಲೋಕ ತ್ಯಜಿಸಿದ್ದಾರೆ.

​ಪ್ರತಿದಿನ ಆಟೋ ಓಡಿಸಿ, ಕಷ್ಟಪಟ್ಟು ಇಡೀ ಕುಟುಂಬವನ್ನು ಸಾಕುತ್ತಿದ್ದ ಏಕೈಕ ಆಸರೆಯನ್ನು ಕಳೆದುಕೊಂಡ ಸಂಬಂಧಿಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. “ಮುಂದೆ ನಮ್ಮ ಜೀವನ ಹೇಗೆ ಸಾಗಬೇಕು?” ಎಂದು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಳೆಗಾಲ ಬಂತೆಂದರೆ ಸಾವು ಎಲ್ಲಿಂದ, ಹೇಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲದಂತಾಗಿದೆ. ಬಿಬಿಎಂಪಿ (BBMP) ಅಧಿಕಾರಿಗಳು ಇಂತಹ ಅಪಾಯಕಾರಿ ಗೋಡೆಗಳು, ಹಳೆಯ ಕಟ್ಟಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸರ್ಕಾರದ ಅಸಡ್ಡೆಯಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕಿದೆ. ಸಾಧ್ಯವಾದಷ್ಟೂ ರಸ್ತೆ ಬದಿಯ ಹಳೆಯ ಮರಗಳು, ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಗೋಡೆಗಳು ಹಾಗೂ ಹಳೆಯ ಕಟ್ಟಡಗಳ ಪಕ್ಕದಲ್ಲಿ ಆಶ್ರಯ ಪಡೆಯುವುದನ್ನು ಅಥವಾ ವಾಹನಗಳನ್ನು ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿ ವಿನಂತಿಸಲಾಗಿದೆ.

 


Share News