ಬೆಳಗಾವಿ: ನಗರದ ರಾಮದೇವ ಗಲ್ಲಿಯಲ್ಲಿರುವ ‘ವಿ.ಪಿ. ವೇರ್ಣೇಕರ ಮತ್ತು ಸನ್ಸ್’ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದ್ದು, ಸ್ವತಃ ದೂರು ನೀಡಿದ್ದ ಅಂಗಡಿಯ ಮಾಲೀಕನೇ ಕಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಟಿಳಕವಾಡಿಯ ಸಾವರಕರ್ ರಸ್ತೆಯ ನಿವಾಸಿ ಕೃಷ್ಣಾನಂದ ವಿಶ್ವನಾಥ ವೇರ್ಣೆಕರ ಬಂಧಿತ ಆರೋಪಿಯಾಗಿದ್ದಾನೆ.
ಜುಲೈ 16ರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಅಂಗಡಿಯ ಬಾಗಿಲು ಮುರಿದು ಒಳಗಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿ ಕೃಷ್ಣಾನಂದ ಜುಲೈ 17ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಖಡೇಬಜಾರ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ, ತಾಂತ್ರಿಕ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದಾಗ ದೂರುದಾರನ ನಡವಳಿಕೆಯ ಮೇಲೆಯೇ ತೀವ್ರ ಅನುಮಾನ ವ್ಯಕ್ತವಾಯಿತು. ತಕ್ಷಣವೇ ಆತನನ್ನು ವಶಕ್ಕೆ ಪಡೆದು ಕಠಿಣ ವಿಚಾರಣೆಗೆ ಒಳಪಡಿಸಿದಾಗ, ತಾನೇ ಕಳವು ನಾಟಕವಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಂಗಡಿಯಲ್ಲಿದ್ದ ಆಭರಣಗಳು ಹಾಗೂ ನಗದನ್ನು ತಾನೇ ತೆಗೆದುಕೊಂಡು ತನ್ನ ಆ್ಯಕ್ಟಿವಾ ಸ್ಕೂಟಿಯ ಡಿಕ್ಕಿಯಲ್ಲಿ ಬಾಂಧಿಸಿ ಸಾಗಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿಯಿಂದ ಪೊಲೀಸರು ಕೆಳಗಿನ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ:
ಚಿನ್ನಾಭರಣ: 519.8 ಗ್ರಾಂ (ಮೌಲ್ಯ ₹62,60,990)
ಬೆಳ್ಳಿ ಆಭರಣ: 31 ಗ್ರಾಂ (ಮೌಲ್ಯ ₹6,000)
ನಗದು ಹಣ: ₹2,83,010
ವಾಹನ: ಆ್ಯಕ್ಟಿವಾ ಸ್ಕೂಟಿ (ಮೌಲ್ಯ ₹45,000)
ಒಟ್ಟು ಜಪ್ತಿ ಮೌಲ್ಯ: ₹65,95,000/-
ದೂರುದಾರನೇ ಸ್ವತಃ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್ಶೀಟ್) ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.
ಪ್ರಕರಣವನ್ನು ಚಾಣಾಕ್ಷತನದಿಂದ ಭೇದಿಸಿದ ಖಡೇಬಜಾರ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.