ಬೆಂಗಳೂರು (ಆನೇಕಲ್): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ನಾಲ್ಕು ಅಪರೂಪದ ಚೀತಾಗಳು (ಶಿವಂಗಿ) ನಗರಕ್ಕೆ ಆಗಮಿಸಿವೆ. ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿನಿಂದ ತರಿಸಲಾಗಿರುವ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರಮಾಡಿಕೊಳ್ಳಲಾಯಿತು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಶುಕ್ರವಾರ ಮಧ್ಯರಾತ್ರಿ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ಭೇಟಿ ನೀಡಿ, ಈ ವಿದೇಶಿ ಅತಿಥಿಗಳನ್ನು ಸ್ವಾಗತಿಸಿದರು. ರಾಜ್ಯದ ಕಾಡುಗಳಲ್ಲಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಶಿವಂಗಿಗಳು ಈಗ ನಾಮಾವಶೇಷವಾಗಿವೆ. ಸಾರ್ವಜನಿಕರಿಗೆ ಈ ಅಪರೂಪದ ಪ್ರಾಣಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸುವುದು ಮತ್ತು ಪ್ರಾಣಿ ಸಂಕುಲದ ವೈವಿಧ್ಯತೆ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಹೊಸ ಪರಿಸರ ಮತ್ತು ಹವಾಮಾನಕ್ಕೆ ಚೀತಾಗಳು ಹೊಂದಿಕೊಳ್ಳಬೇಕಿರುವುದರಿಂದ ಹಾಗೂ ಯಾವುದೇ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಪಶುವೈದ್ಯಾಧಿಕಾರಿಗಳು ಇವುಗಳನ್ನು 30 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಿದ್ದಾರೆ. ಈ ಅವಧಿಯಲ್ಲಿ ಅವುಗಳಿಗೆ ನಿಗದಿತ ಆಹಾರ ಮತ್ತು ವೈದ್ಯಕೀಯ ನಿಗಾ ವಹಿಸುವಂತೆ ಸಚಿವರು ಸೂಚಿಸಿದ್ದಾರೆ.
ಪ್ರಾಣಿ ಕ್ವಾರಂಟೈನ್ ಸೇವೆಗಳಿಂದ (AQCS) ಮುಂಗಡವಾಗಿ ಅನುಮತಿ ಪಡೆದ ನಂತರವೇ ಈ ಪ್ರಕ್ರಿಯೆ ನಡೆಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಯಶಸ್ವಿ ಪ್ರಾಣಿ ವಿನಿಮಯಕ್ಕಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನವು ದಕ್ಷಿಣ ಆಫ್ರಿಕಾದ ಇಂಡುನಾ ಪಾರ್ಕಿಗೆ ಕೃತಜ್ಞತೆ ಸಲ್ಲಿಸಿದೆ.
ಕ್ವಾರಂಟೈನ್ ಅವಧಿ ಮುಗಿದ ನಂತರ, ಈ ನಾಲ್ಕು ಚೀತಾಗಳು ಮೃಗಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಇದು ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದು, ಮೃಗಾಲಯದ ಆದಾಯ ಮತ್ತು ಶೈಕ್ಷಣಿಕ ಮೌಲ್ಯವನ್ನೂ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.