ಹೊಸನಗರ: ತಾಲೂಕಿನ ಹುಂಚ ಹೋಬಳಿಯ ಹೊನ್ನೇಬೈಲು ಗ್ರಾಮದ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು, ಜಾಗ ಒತ್ತುವರಿ ಮಾಡಲು ಯತ್ನಿಸುತ್ತಿದ್ದ ಭಾರಿ ಹಗರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ನಿಟ್ಟೂರು ನಿವಾಸಿ ಸುರೇಶ ಎನ್.ಜಿ. ಬಿನ್ ಗಿಡ್ಡನಾಯ್ಕ (50) ಬಂಧಿತ ಆರೋಪಿಯಾಗಿದ್ದಾನೆ.
ಹೊನ್ನೇಬೈಲು ಗ್ರಾಮದ ಸರ್ವೇ ನಂಬರ್ 99ರ ಸರ್ಕಾರಿ ಗೋಮಾಳದ ಒತ್ತುವರಿ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಬೀಟೆ ಹಾಗೂ ಇತರೆ ಜಾತಿಯ ಅತ್ಯಂತ ಬೆಲೆಬಾಳುವ ಮರಗಳನ್ನು ಬುಡಸಮೇತ ಕಿತ್ತು ಹಾಕಲಾಗಿತ್ತು. ಬಳಿಕ ಆ ಮರಗಳನ್ನು ಅಕ್ರಮವಾಗಿ ಸಾಗಿಸುವ ಉದ್ದೇಶದಿಂದ ನಾಟ (ಮರಮುಟ್ಟು) ಹಾಗೂ ಸೌದೆಯನ್ನಾಗಿ ಪರಿವರ್ತಿಸಿ, ಅದೇ ಜಾಗದಲ್ಲಿ ದಾಸ್ತಾನು ಮಾಡಲಾಗಿತ್ತು. ಈ ಅರಣ್ಯ ಲೂಟಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಆರೋಪಿ ಸುರೇಶ ಮೇ 12 ರಿಂದ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗೆ ದಕ್ಕದಂತೆ ತಲೆಮರೆಸಿಕೊಂಡಿದ್ದನು.
ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೇ 14 ರಂದು ಆರೋಪಿಯ ಚಲನವಲನದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಮೇಲಧಿಕಾರಿಗಳ ನಿರ್ದೇಶನದಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ವಿಶೇಷ ತಂಡ ದಾಳಿ ನಡೆಸಿ, ಆರೋಪಿ ಸುರೇಶನನ್ನು ಯಶಸ್ವಿಯಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿ ವಿರುದ್ಧ ಅರಣ್ಯ ಮೊಕದ್ದಮೆ ಸಂಖ್ಯೆ: 08/2026-27 ರಡಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರ್ಕಾರಿ ಗೋಮಾಳ ಒತ್ತುವರಿ ಹಾಗೂ ಅರಣ್ಯ ಸಂಪತ್ತು ಲೂಟಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.