ಹಾಸನ: ಹಾಡುಹಗಲೇ ನಡೆದ ಭಾರಿ ಮೊತ್ತದ ಕಳ್ಳತನ ಪ್ರಕರಣವನ್ನು ಹಾಸನ ಗ್ರಾಮಾಂತರ ಪೊಲೀಸರು ಕೇವಲ ಒಂದೇ ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಯಲ್ಲೇ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದ ಕೇಶವೇಗೌಡ ಎಂಬುವವರ ಮನೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಮಗ ವೇಣುಗೋಪಾಲ್ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದಾಗ, ಮನೆಯಲ್ಲಿದ್ದ ಸೊಸೆ ಅಮೃತಾ ಮಗನನ್ನು ಶಾಲೆಗೆ ಕಳುಹಿಸಿ ಮನೆಗೆ ಮರಳಿದ್ದಳು.
ಬಳಿಕ ಅಮೃತಾ ತನ್ನ ಗೆಳೆಯ ಕೆ.ಹಿರೀಹಳ್ಳಿ ಗ್ರಾಮದ ಪರಮೇಶ್ (ಅಲಿಯಾಸ್ ಚೇತನ್) ಗೆ ಕರೆ ಮಾಡಿ ಮನೆಗೆ ಬರಹೇಳಿ, ಬೀರುವಿನಲ್ಲಿದ್ದ ಸುಮಾರು ₹56,16,000 ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ ₹13.40 ಲಕ್ಷ ನಗದನ್ನು ನೀಡಿದ್ದಳು.
ಹಣ-ಆಭರಣ ಪಡೆದು ಪ್ರಿಯಕರ ಪರಮೇಶ್ ಬೈಕ್‌ನಲ್ಲಿ ಜಾಗ ಖಾಲಿ ಮಾಡಿದರೆ, ಇತ್ತ ಅಮೃತಾ ಮನೆಯ ಮುಂಭಾಗಿಲಿಗೆ ಬೀಗ ಹಾಕದೆ ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ಏನೂ ತಿಳಿಯದಂತೆ ಜಮೀನಿನ ಕಡೆ ತೆರಳಿದ್ದಳು. ಸಂಜೆ ಕುಟುಂಬಸ್ಥರು ಮನೆಗೆ ಬಂದಾಗ ಬೀರು ತೆರೆದಿರುವುದು ಕಂಡುಬಂದಿದೆ. ಈ ವೇಳೆ ಸೊಸೆ ಅಮೃತಾ ತನಗೇನೂ ತಿಳಿಯದಂತೆ “ಅಯ್ಯೋ ಕಳ್ಳತನವಾಯ್ತು!” ಎಂದು ನಾಟಕವಾಡಿದ್ದಳು.
ಘಟನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಸೊಸೆ ಅಮೃತಾಳ ನಡವಳಿಕೆ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಪ್ರಕರಣ ನಡೆದ ಕೇವಲ 24 ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕಳುವಾಗಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ತಂಡದ ಈ ಸೂಪರ್ ಫಾಸ್ಟ್ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.