ಉಡುಪಿ: ಕ್ರಿಮಿನಲ್ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ಉಮರ್ ಫಾರೂಕ್ ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ಉಡುಪಿ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ. ಸೇನ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 03/2025 ರ ಪ್ರಕರಣದಲ್ಲಿ ಆರೋಪಿ ನೋಮಾನ್ಗೆ ಜಾಮೀನು ಪಡೆಯಲು ಆರೋಪಿಗಳು ಸಂಚು ರೂಪಿಸಿದ್ದರು. ಈ ವೇಳೆ ಉಮರ್ ಫಾರೂಕ್ ಎಂಬಾತನು ಪ್ರಶಾಂತ್ ಅವರಿಗೆ ಸೇರಿದ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು, ಅದರಲ್ಲಿ ಕೆ.ಟಿ. ಮೊಹಮ್ಮದ್ ಅವರ ಹೆಸರು ಹಾಗೂ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿದ್ದನು.
ಇನ್ನೊಬ್ಬ ವ್ಯಕ್ತಿಯಂತೆ ನಟಿಸಿ ನ್ಯಾಯಾಲಯವನ್ನು ದಾರಿ ತಪ್ಪಿಸುವ ದುರುದ್ದೇಶದಿಂದ ಈ ನಕಲಿ ದಾಖಲೆಯನ್ನು ಸಿದ್ಧಪಡಿಸಲಾಗಿತ್ತು. 2026ರ ಆಗಸ್ಟ್ 30ರಂದು ಈ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ನ್ಯಾಯಾಲಯದ ಜೊತೆಗೆ ಕೆ.ಟಿ. ಮೊಹಮ್ಮದ್ ಮತ್ತು ಪ್ರಶಾಂತ್ ಅವರಿಗೂ ವಂಚನೆ ಎಸಗಲಾಗಿತ್ತು.
ಪ್ರಕರಣ ದಾಖಲು ಹಾಗೂ ಬಂಧನ:
ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಸೆಕ್ಷನ್ಗಳು ಹಾಗೂ ಆಧಾರ್ ಕಾಯ್ದೆಯಡಿ ಅಪರಾಧ ಸಂಖ್ಯೆ 110/2026 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಉಡುಪಿ ನಗರ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ. ಅವರ ಮಾರ್ಗದರ್ಶನ ಹಾಗೂ ತನಿಖೆ-2 ಪಿಎಸ್ಐ ರತ್ನಾಕರ್ ಕೆ. ನೇತೃತ್ವದ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.