Share News

ಬೆಳಗಾವಿ: ಜಿಲ್ಲೆಯ ಸುಳಗಾ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಬೆಳಗಾವಿ ಸಿಸಿಬಿ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ‘ಪೆನ್ನಿ ಡ್ರಗ್ಸ್’ ವಶಪಡಿಸಿಕೊಳ್ಳಲಾಗಿದೆ.

​ಪೊಲೀಸ್ ಶ್ವಾನ ‘ಆದಿತಿ’ ಸಾಹಸ:

ನಾಗೇಶ್ ಭಗತ್ ಎಂಬಾತ ಮುಂಬೈಯಿಂದ ಪೆನ್ನಿ ಡ್ರಗ್ಸ್ ತರಿಸಿಕೊಂಡು ಸುಳಗಾ ಗ್ರಾಮದ ಬಾಡಿಗೆ ಮನೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದರು. ಪೊಲೀಸರ ಸುಳಿವು ಅರಿತ ಆರೋಪಿಯು ಡ್ರಗ್ಸ್ ಚೀಟಿಗಳನ್ನು ಮನೆಯ ಹಾಸಿಗೆಯ ಕೆಳಗೆ ಅಡಗಿಸಿಟ್ಟಿದ್ದನು. ಆದರೆ, ಪೊಲೀಸ್ ಶ್ವಾನ ದಳದ ‘ಆದಿತಿ’ ತನ್ನ ಚುರುಕಾದ ವಾಸನೆ ಗ್ರಹಿಸುವ ಶಕ್ತಿಯ ಮೂಲಕ ಡ್ರಗ್ಸ್ ಅಡಗಿಸಿಟ್ಟಿದ್ದ ಜಾಗವನ್ನು ಪತ್ತೆ ಹಚ್ಚಿ ಪೊಲೀಸರಿಗೆ ಸಹಕರಿಸಿತು.

ಈ ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು 13 ಗ್ರಾಂ ಪೆನ್ನಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 2.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾದಕ ವಸ್ತುವಿನ ಜೊತೆಗೆ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

​ಆರೋಪಿಗಳ ಬಂಧನ:

ಘಟನೆಗೆ ಸಂಬಂಧಿಸಿದಂತೆ ಮೂಲತಃ ಮುಂಬೈನ ಸಂಪರ್ಕ ಹೊಂದಿರುವ ನಾಗೇಶ್ ಭಗತ್ ಹಾಗೂ ಆತನಿಗೆ ಸಾಥ್ ನೀಡಿದ್ದ ರಾಹುಲ್ ಜಾಧವ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ಸ್ ಜಾಲದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 


Share News