ತುಮಕೂರು: ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರ ಜಿಲ್ಲಾ ತಂಡವನ್ನು ತಿಲಕ್ ಪಾರ್ಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಉಮರ್ (32), ನಜೀರ್ (35), ನವೀದ್ (32) ಮತ್ತು ತುಮಕೂರಿನ ಮರಳೂರುದಿಣ್ಣೆ ನಿವಾಸಿಗಳಾದ ಶಾಹಬಾಜ್ (30), ಮಹಮ್ಮದ್ ಗೌಸ್ (32) ಹಾಗೂ ಮಹಮ್ಮದ್ ಇಕ್ಬಾಲ್ (28) ಎಂದು ಗುರುತಿಸಲಾಗಿದೆ. ಈ ತಂಡದಲ್ಲಿ ಬೆಂಗಳೂರು ಮತ್ತು ತುಮಕೂರಿನ ಆರೋಪಿಗಳು ಕೈಜೋಡಿಸಿರುವುದು ಬೆಳಕಿಗೆ ಬಂದಿದೆ.
ನಗರದ ವಿವಿಧ ಕಾಲೇಜುಗಳ ಮುಂಭಾಗದಲ್ಲಿ ಅನುಮಾನಾಸ್ಪದವಾಗಿ ನಿಂತು ವಿದ್ಯಾರ್ಥಿಗಳಿಗೆ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಿಲಕ್ ಪಾರ್ಕ್ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಮಾರಾಟಕ್ಕೆ ಇಟ್ಟಿದ್ದ Tapedac-100mg ಹಾಗೂ Tydel-100mg (Tapentadol Tablets) ಎಂಬ ಒಟ್ಟು 100 ಮಾದಕ ಮಾತ್ರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವೈದ್ಯರ ಚೀಟಿ ಇಲ್ಲದೆ ಇವುಗಳನ್ನು ದುಬಾರಿ ಬೆಲೆಗೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಯುವಜನತೆಯನ್ನು ದಾರಿ ತಪ್ಪಿಸಲು ಇವರು ಸಂಚು ರೂಪಿಸಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಮಾತ್ರೆಗಳನ್ನು ಆರೋಪಿಗಳು ಎಲ್ಲಿಂದ ಪೂರೈಕೆ ಮಾಡುತ್ತಿದ್ದರು ಮತ್ತು ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳಿದ್ದಾರೆಯೇ ಎಂಬ ಬಗ್ಗೆ ತಿಲಕ್ ಪಾರ್ಕ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
