Share News

ಚಾಮರಾಜನಗರ: ವಿಶ್ವವಿಖ್ಯಾತ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ರೌಡಿಶೀಟರ್ ಹಾಗೂ ಆತನ ಸಂಗಡಿಗರು ನಿಷೇಧಿತ ಪ್ರದೇಶದಲ್ಲಿ ಮದ್ಯಪಾನ (ಎಣ್ಣೆ ಪಾರ್ಟಿ) ನಡೆಸಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ (RFO) ಡಿ. ಪುನೀತ್‌ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

​ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಮೀನಾಕ್ಷಿ ನೇಗಿ ಅವರು ಈ ಅಮಾನತು ಆದೇಶವನ್ನು ಹೊರಡಿಸಿದ್ದು, ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ಅತ್ಯಂತ ಸೂಕ್ಷ್ಮ ಹಾಗೂ ನಿಷೇಧಿತ ಅರಣ್ಯ ಪ್ರದೇಶದಲ್ಲಿರುವ ಕಳ್ಳಬೇಟೆ ತಡೆ ಶಿಬಿರದಲ್ಲಿ (Anti-Poaching Camp) ರೌಡಿಶೀಟರ್ ಸತೀಶ್ ಹಾಗೂ ಆತನ ಸಂಗಡಿಗರು ರಾಜಾರೋಷವಾಗಿ ಮದ್ಯಪಾನ ಪಾರ್ಟಿ ನಡೆಸಿದ್ದರು. ವನ್ಯಜೀವಿಗಳ ರಕ್ಷಣೆಗಾಗಿ ಇರುವ ಕಟ್ಟುನಿಟ್ಟಿನ ಜಾಗದಲ್ಲೇ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಮೋಜು-ಮಸ್ತಿ ನಡೆಸಿರುವುದು ಅರಣ್ಯ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿತ್ತು.

ಅತಿ ಹೆಚ್ಚು ಭದ್ರತೆ ಇರುವ ಅರಣ್ಯ ವಲಯದೊಳಗೆ ರೌಡಿಶೀಟರ್‌ಗಳು ಪ್ರವೇಶಿಸಿ ಪಾರ್ಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಮತ್ತು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಲಯದ ಮುಖ್ಯಸ್ಥರಾದ ಆರ್‌ಎಫ್‌ಒ ಡಿ. ಪುನೀತ್‌ಕುಮಾರ್ ಅವರು ತೀವ್ರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪರಿಗಣಿಸಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಇಲಾಖೆಯು ಅಮಾನತು ಮಾಡಿದೆ.

ಬಂಡೀಪುರದಂತಹ ಸುರಕ್ಷಿತ ವ್ಯಾಪ್ತಿಯಲ್ಲಿ ಇಂತಹದೊಂದು ಕಾನೂನುಬಾಹಿರ ಘಟನೆ ನಡೆದಿರುವುದು ಬೆಳಕಿಗೆ ಬಂದ ತಕ್ಷಣ, ಇಡೀ ಅರಣ್ಯ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಮತ್ತು ಪ್ರಶ್ನೆಗಳು ಎದ್ದಿದ್ದವು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಉನ್ನತ ಅಧಿಕಾರಿಗಳು, ಇಲಾಖೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮತ್ತು ಕಾನೂನು ಉಲ್ಲಂಘನೆಗೆ ಆಸ್ಪದವಿಲ್ಲ ಎಂಬ ಕಟ್ಟುನಿಟ್ಟಿನ ಸಂದೇಶವನ್ನು ಈ ಅಮಾನತು ಆದೇಶದ ಮೂಲಕ ನೀಡಿದ್ದಾರೆ. ಪ್ರಕರಣದ ಕುರಿತು ಮತ್ತಷ್ಟು ಆಳವಾದ ತನಿಖೆ ಮುಂದುವರಿದಿದ್ದು, ಇನ್ನುಳಿದ ಸಿಬ್ಬಂದಿಗಳ ಪಾತ್ರದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 


Share News