ಶಿವಮೊಗ್ಗ: ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೈಕ್ ವೀಲಿಂಗ್ ಪ್ರದರ್ಶನ ಮಾಡುತ್ತಿದ್ದ ಖಾಸಗಿ ಬ್ಯಾಂಕ್ ನೌಕರನೊಬ್ಬನ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆತನ ಬೈಕನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗದ ಮಲವಗೊಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ-69ರ 3ನೇ ಕ್ರಾಸ್ ಬಳಿ ಯುವಕನೊಬ್ಬ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ವೀಲಿಂಗ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೂರ್ವ ಸಂಚಾರ ಠಾಣೆಯ ಪೊಲೀಸರು, ತಕ್ಷಣವೇ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ತನಿಖೆಯ ವೇಳೆ ವೀಲಿಂಗ್ ಮಾಡಿದ್ದ ಯುವಕ (20 ವರ್ಷ) ಹೊಳೆಬೆನವಳ್ಳಿ ದೊಡ್ಡತಾಂಡಾ ನಿವಾಸಿ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗದ ಖಾಸಗಿ ಬ್ಯಾಂಕ್‌ವೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಂತಹ ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಕಾನೂನು ರೀತ್ಯಾ ಮೊಕದ್ದಮೆ ಹೂಡಿದ್ದಾರೆ. ಅಲ್ಲದೆ, ವೀಲಿಂಗ್ ಮಾಡಲು ಬಳಸಿದ್ದ ಬೈಕನ್ನು ಸಹ ವಶಕ್ಕೆ ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಲೈಕ್ಸ್ ಗಳಿಸುವ ಹಪಾಹಪಿಗೆ ಬಿದ್ದು ಸಾರ್ವಜನಿಕ ರಸ್ತೆಗಳಲ್ಲಿ ವೀಲಿಂಗ್‌ನಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇಂತಹ ಅಪಾಯಕಾರಿ ಸಾಹಸಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮತ್ತೊಮ್ಮೆ ಎಚ್ಚರಿಸಿದ್ದಾರೆ.