ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮತ್ತೆ ಜೋರಾಗಲಿದ್ದು, ಮುಂದಿನ ದಿನಗಳಲ್ಲಿ ವರುಣದೇವ ರಾಜ್ಯದ ಜನತೆಗೆ ತಣ್ಣನೆಯ ಸಾಥ್ ನೀಡಲಿದ್ದಾನೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ರಾಜ್ಯಾದ್ಯಂತ ಮೇ 29ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಲಾಗಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಬರೋಬ್ಬರಿ 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ನೀಡಲಾಗಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.
ಜಿಲ್ಲೆಗಳ ಪಟ್ಟಿ:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಯಾದಗಿರಿ, ರಾಯಚೂರು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು.
ಬೆಂಗಳೂರಿಗರಿಗೆ ಮುಂದಿನ 48 ಗಂಟೆ ಮಹತ್ವದ ಎಚ್ಚರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣದಿಂದ ಜೋರಾದ ಮಳೆಯಾಗುವ ಸಾಧ್ಯತೆಯಿದೆ. ನಗರಕ್ಕೂ ಸಹ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಸಾರ್ವಜನಿಕರು ಹೊರಗಡೆ ಸಂಚರಿಸುವಾಗ ಕೊಡೆ (ಅಂಬ್ರೆಲ್ಲಾ) ಅಥವಾ ಮಳೆಕೋಟ್ ಕ್ಯಾರಿ ಮಾಡುವುದು ಉತ್ತಮ ಎಂದು ಇಲಾಖೆ ಸಲಹೆ ನೀಡಿದೆ.
ಪ್ರಾದೇಶಿಕ ಹವಾಮಾನ ಮುನ್ಸೂಚನೆ:
ಕರಾವಳಿ ಭಾಗ: ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ಒತ್ತಡ ಹೆಚ್ಚಿದ್ದರೆ ಉಳಿದ ಜಿಲ್ಲೆಗಳಿಗೂ ಮಳೆ ವ್ಯಾಪಿಸಲಿದೆ.
ದಕ್ಷಿಣ ಒಳನಾಡು: ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಹಾಗೂ ರಾತ್ರಿ ವೇಳೆಗೆ ಗುಡುಗು-ಮಿಂಚಿನ ಸಹಿತ ಅರ್ಭಟಿಸಲಿದ್ದಾನೆ.
ನಾಗರಿಕರೇ ಎಚ್ಚರ – ಇಲಾಖೆಯ ಪ್ರಮುಖ ಸೂಚನೆ:
ಮೇ 29ರ ವರೆಗೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಮಳೆಯ ಅಬ್ಬರ ಇರಲಿದ್ದು, ಸಾರ್ವಜನಿಕರು ತಮ್ಮ ವಾರಾಂತ್ಯದ ಯೋಜನೆಗಳನ್ನು ಮಳೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿಕೊಳ್ಳಲು ಕೋರಲಾಗಿದೆ. ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಮತ್ತು ಮಳೆಯ ನಡುವೆ ಪ್ರಯಾಣ ಬೆಳೆಸುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
ವರದಿ :- ಗಿಲ್ಬರ್ಟ್. ಜೆ