ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಮತ್ತು ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಡ್ರಗ್ಸ್ ಮಾರಾಟವಾಗುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಈ ದಾಳಿಗಳನ್ನು ನಡೆಸಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಒಬ್ಬ ವಿದೇಶಿ ಪ್ರಜೆ, ಹೊರರಾಜ್ಯದ ನಾಲ್ವರು ಹಾಗೂ ಮೂವರು ಸ್ಥಳೀಯ ವ್ಯಕ್ತಿಗಳು ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಟ್ಟು 27.42 ಕೋಟಿ ಮಾರುಕಟ್ಟೆ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ 12 ಕೆಜಿ 91 ಗ್ರಾಂ ಎಂಡಿಎಂಎ (MDMA), 275 ಗ್ರಾಂ ಕೋಕೆನ್ ಮತ್ತು ಸುಮಾರು 34 ಕೆಜಿಗೂ ಅಧಿಕ ಗಾಂಜಾ ಸೇರಿದೆ. ವಿಚಾರಣೆಯ ವೇಳೆ ಆರೋಪಿಗಳು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭದ ಆಸೆಯಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಮಾದಕ ವಸ್ತುಗಳ ಜೊತೆಗೆ 2.85 ಲಕ್ಷ ನಗದು, 40 ಗ್ರಾಂ ಚಿನ್ನಾಭರಣ, ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಬೃಹತ್ ಕಾರ್ಯಾಚರಣೆಯು ಬೆಂಗಳೂರಿನ ವಿವಿಧ ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳಾದ (DCP) ಶ್ರೀ. ನಾರಾಯಣ್ ಎಂ , ಶ್ರೀ. ಜಿ ಕೆ ಮಿಥುನ್ ಕುಮಾರ್, ಶ್ರೀ. ಮೊಹಮ್ಮದ್ ಸುಜೀತ ಎಂ ಎಸ್ ಮತ್ತು ಡಾ. ವಿಕ್ರಮ್ ಆಮಟೆ ಅವರುಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ. ಸಹಾಯಕ ಪೊಲೀಸ್ ಆಯುಕ್ತರುಗಳಾದ (ACP) ಶ್ರೀ. ಸತೀಶ್ ಕೆಎಂ, ಶ್ರೀ. ನರಸಿಂಹಮೂರ್ತಿ ಪಿ, ಶ್ರೀ. ಮುರುಗೇಂದ್ರಯ್ಯ, ಶ್ರೀ. ಶಿವಶಂಕರ್ ರೆಡ್ಡಿ ಮತ್ತು ಶ್ರೀ. ಉಮಾಶಂಕರ್ ಎಂ ಹೆಚ್ ರವರುಗಳು ಈ ತಂಡಗಳ ನೇತೃತ್ವವನ್ನು ವಹಿಸಿದ್ದರು.
ಇದಲ್ಲದೆ, ಕಾರ್ಯಚರಣೆಯ ಮುಂಚೂಣಿಯಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀ. ಸೋಮಶೇಖರ್ ಜಿ (ಹೆಬ್ಬಗೋಡಿ ಠಾಣೆ), ಶ್ರೀ. ಸುಧಾಕರ್ ರೆಡ್ಡಿ ಎ (ಯಲಹಂಕ ಉಪನಗರ ಠಾಣೆ), ಶ್ರೀ. ಅಶೋಕ್ ಬಿ ಎಸ್ (ಬಾಗಲೂರು ಠಾಣೆ), ಶ್ರೀ. ನಟರಾಜ್ ಡಿ ಎನ್ (ಮೈಕೋಲೇಔಟ್ ಠಾಣೆ), ಶ್ರೀ. ಸತೀಶ್ ಬಿ ಎಸ್ (ಪರಪ್ಪನ ಅಗ್ರಹಾರ ಠಾಣೆ) ಮತ್ತು ಶ್ರೀ. ಅರುಣ್ ಸಾಲುಂಕೆ (ಬಾಣಸವಾಡಿ ಠಾಣೆ) ರವರುಗಳ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್