ಯಲ್ಲಾಪುರ: ಇಲ್ಲಿನ ಅರಬೈಲ್ ಗ್ರಾಮದ ಶಿರಡಿಕೆರೆ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ ಕೇವಲ ನಾಲ್ಕು ದಿನಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ವಾಹನ ಸೇರಿದಂತೆ ಒಟ್ಟು 1.19 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಏಪ್ರಿಲ್ 18ರ ಸಂಜೆ ಮತ್ತು 19ರ ಬೆಳಗಿನ ಜಾವದ ನಡುವೆ, ಅರಬೈಲ್ ಗ್ರಾಮದ ಶ್ರೀ ಶಿರಡಿಕೆರೆ ಮಹಾಗಣಪತಿ ದೇವಸ್ಥಾನದ ಗರ್ಭಗುಡಿ ಹಾಗೂ ಪಕ್ಕದ ಕೊಠಡಿಗಳ ಬೀಗ ಒಡೆದಿದ್ದ ಕಳ್ಳರು ದೇವಸ್ಥಾನದ ಪವಿತ್ರ ವಸ್ತುಗಳನ್ನು ದೋಚಿದ್ದರು. ಈ ಸಂಬಂಧ ಸುಣಜೋಗ ನಿವಾಸಿ ಶ್ರೀ ಶಿವರಾಮ ಕೃಷ್ಣ ಭಟ್ಟ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಯಲ್ಲಾಪುರದ ಅಂಬೇಡ್ಕರ್ ನಗರದ ನಿವಾಸಿ ಹಾಗೂ ಪಾತ್ರೆ ವ್ಯಾಪಾರಿಯಾದ ಕೃಷ್ಣಾನಂದ ಪರಶುರಾಮ ಇಂಗಳೆ (28) ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 1,00,000 ರೂ. ಮೌಲ್ಯದ ಓಮ್ನಿ ವಾಹನ, 10 ಹಿತ್ತಾಳೆ ಗಂಟೆಗಳು, ತಾಮ್ರದ ಕೊಡ, ಕೈ ಆರತಿಗಳು, ತಾಟುಗಳು, ದೀಪದ ಸ್ತಂಭಗಳು ಸೇರಿದಂತೆ ಒಟ್ಟು 19,900 ರೂ. ಮೌಲ್ಯದ ಪೂಜಾ ಸಾಮಗ್ರಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಅನ್ನು ಜಪ್ತು ಮಾಡಲಾಗಿದೆ. ಜಪ್ತು ಮಾಡಲಾದ ಒಟ್ಟು ಮೊತ್ತ 1,19,900 ರೂ. ಎಂದು ಅಂದಾಜಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್.ಎನ್. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಯಲ್ಲಾಪುರ ಪಿಐ ರಮೇಶ ಹನಾಪುರ ಅವರ ನೇತೃತ್ವದಲ್ಲಿ, ಪಿಎಸ್‌ಐಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಪತ್ತೆ ಕಾರ್ಯ ನಡೆಸಿದೆ.
ತ್ವರಿತವಾಗಿ ಪ್ರಕರಣ ಭೇದಿಸಿ ಆರೋಪಿಯನ್ನು ಸೆರೆಹಿಡಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.