ರಾಮನಗರ: ಕಾಡು ಪ್ರಾಣಿಗಳ ಕಾನೂನುಬಾಹಿರ ಬೇಟೆಗೆ ಬಳಸಲಾಗುತ್ತಿದ್ದ ಸ್ಫೋಟಕಗಳು ಮತ್ತು ಮಾರಕ ಮದ್ದು-ಗುಂಡುಗಳ ಅಕ್ರಮ ಮಾರಾಟ ಜಾಲವನ್ನು ಭೇದಿಸುವಲ್ಲಿ ಅರಣ್ಯ ಸಂಚಾರಿ ದಳ, ಅಪರಾಧ ಕೋಶ, ರಾಮನಗರ ಅರಣ್ಯ ವಿಭಾಗ ಹಾಗೂ ಸಾತನೂರು ಪೊಲೀಸರ ಜಂಟಿ ಪಡೆ ಭಾರಿ ಯಶಸ್ಸು ಗಳಿಸಿದೆ. ಕೋಡಿಹಳ್ಳಿ ಮತ್ತು ನಲ್ಲಹಳ್ಳಿಯ ಎರಡು ಪ್ರತ್ಯೇಕ ರಹಸ್ಯ ಅಡಗುದಾಣಗಳ ಮೇಲೆ ನಡೆಸಿದ ಮಿಂಚಿನ ದಾಳಿಯಲ್ಲಿ ದಿನಸಿ ಅಂಗಡಿಯ ಸಾಮಗ್ರಿಗಳಂತೆ ರಾಶಿ ಹಾಕಲಾಗಿದ್ದ ನೂರಾರು ಮಾರಕ ಸ್ಫೋಟಕಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವನ್ಯಜೀವಿಗಳ ಹತ್ಯೆಗಾಗಿ ಈ ಜಾಲವು ದೀರ್ಘಕಾಲದಿಂದ ಸಕ್ರಿಯವಾಗಿದ್ದು, ಹಂತಕರಿಗೆ ಯದ್ವಾತದ್ವಾ ಮದ್ದು-ಗುಂಡುಗಳನ್ನು ಪೂರೈಸುತ್ತಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಜಂಟಿ ದಾಳಿಯ ವೇಳೆ ಬಂದೂಕಿಗೆ ಬಳಸುವ ತರಹೇವಾರಿ ಮದ್ದುಗುಂಡುಗಳು, ರಾಸಾಯನಿಕ ಮಿಶ್ರಣಕ್ಕೆ ಬಳಸುವ ಬಿಳಿ ಮತ್ತು ಕೆಂಪು ಪೊಟಾಸಿಯಂ, ಸೈಕಲ್ ಬಾಲ್ಸ್ ಹಾಗೂ ಭಾರಿ ಪ್ರಮಾಣದ ಸೀಸದ ಕಡ್ಡಿಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದಿಂದ ಈಗಾಗಲೇ ಎಷ್ಟು ಹಂತಕರು ಮಾರಕ ವಸ್ತುಗಳನ್ನು ಖರೀದಿಸಿದ್ದಾರೋ ಎನ್ನುವ ತೀವ್ರ ಆತಂಕ ಕಾಡುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.
ದಾಳಿ ನಡೆದ ಪ್ರದೇಶವು ಅತ್ಯಂತ ಸೂಕ್ಷ್ಮ ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳ ನೆರಳು ಇರುವ ಸ್ಥಳ ಎನ್ನಲಾಗಿದ್ದು, ಕಾರ್ಯಾಚರಣೆಯ ವೇಳೆ ತೀವ್ರ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಒಬ್ಬನ ಸೆರೆ, ಮತ್ತೊಬ್ಬ ಪರಾರಿ
ಅಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ಪ್ರಮುಖ ಆರೋಪಿ ರುದ್ರೇಶ್ ಎಂಬಾತನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಈ ಬಂಧನದ ಪ್ರಕ್ರಿಯೆಯ ವೇಳೆ ಸ್ಥಳೀಯವಾಗಿ ತೀವ್ರ ಗೊಂದಲ ಮತ್ತು ಪ್ರತಿರೋಧ ವ್ಯಕ್ತವಾಯಿತಾದರೂ, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಇದೇ ವೇಳೆ ಇಲಾಖೆಯ ಕಣ್ಣು ತಪ್ಪಿಸಿ ಮತ್ತೊಬ್ಬ ಪ್ರಮುಖ ಆರೋಪಿ ಶಿವಮಲ್ಲೇಗೌಡ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ವನ್ಯಜೀವಿ ರಕ್ಷಣೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಎನ್ನಲಾದ ಈ ಬೃಹತ್ ದಾಳಿಯು ಪಿಸಿಸಿಎಫ್ (ವನ್ಯಜೀವಿ) ಕುಮಾರ್ ಪುಷ್ಕರ್, ಎಪಿಸಿಸಿಎಫ್ (ಜಾಗೃತ ದಳ) ಮನೋಜ್ ಕುಮಾರ್ ತ್ರಿಪಾಠಿ ಹಾಗೂ ರಾಮನಗರ ಡಿಸಿಎಫ್ ರಾಮಕೃಷ್ಣ ಅವರ ನೇರ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜರುಗಿದೆ. ತಪ್ಪಿಸಿಕೊಂಡಿರುವ ಆರೋಪಿಯ ಪತ್ತೆಯ ನಂತರ ಈ ಜಾಲದ ಹಿಂದಿರುವ ಪ್ರಭಾವಿ ವ್ಯಕ್ತಿಗಳ ಮುಖವಾಡ ಕಳಚುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.