Share News

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಬಲವರ್ಧನೆ ಹಾಗೂ ಆಧುನೀಕರಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಿಕ್ಕಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್‌ ಫೋರೆನ್ಸಿಕ್‌ ವ್ಯಾನ್‌ಗಳು ಹಾಗೂ 75 ಹೊಸ ಬೊಲೆರೋ ವಾಹನಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳು, “ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುತ್ತಿದ್ದರೆ, ಗಡಿಯೊಳಗೆ ಆರಕ್ಷಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದಾರೆ. ಈ ಇಬ್ಬರ ನಿರಂತರ ಮತ್ತು ಶ್ರದ್ಧಾಪೂರ್ವಕ ಸೇವೆಯಿಂದಾಗಿ ನಮ್ಮ ರಾಜ್ಯ ಹಾಗೂ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಅನುಕೂಲವಾಗಿದೆ” ಎಂದು ಪ್ರಶಂಸಿಸಿದರು. ಪೊಲೀಸ್‌ ಇಲಾಖೆಗೆ ಹೊಸ ವಾಹನಗಳನ್ನು ಒದಗಿಸುತ್ತಿರುವುದು ಇಲಾಖೆಯ ಕಾರ್ಯಕ್ಷಮತೆಗೆ ಮತ್ತಷ್ಟು ಹೊಸ ಶಕ್ತಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕುವಲ್ಲಿ ಪೊಲೀಸ್ ಅಧಿಕಾರಿಗಳು ತೋರಿರುವ ದಕ್ಷತೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು. “ಇಲಾಖೆಯ ಅಧಿಕಾರಿಗಳು ಈಗಾಗಲೇ ಸಾವಿರಾರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ (ಸೀಜ್‌) ಮಾಡಿದ್ದಾರೆ. ಇದೊಂದು ದೊಡ್ಡ ಐತಿಹಾಸಿಕ ದಾಖಲೆಯಾಗಿದ್ದು, ಕರ್ನಾಟಕ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಸಾಮರ್ಥ್ಯ ಮತ್ತು ಶೌರ್ಯವನ್ನು ಇಂದು ಇಡೀ ದೇಶವೇ ಕೊಂಡಾಡುತ್ತಿದೆ” ಎಂದು ಹೆಮ್ಮೆಯಿಂದ ತಿಳಿಸಿದರು. ಅಲ್ಲದೆ, ಹಗಲು-ರಾತ್ರಿ ಎನ್ನದೆ ಸಾರ್ವಜನಿಕರ ರಕ್ಷಣೆಗಾಗಿ ಶ್ರಮಿಸುವ ಪೊಲೀಸ್ ಅಧಿಕಾರಿಗಳ ಬೆನ್ನಿಗೆ ಸರ್ಕಾರ ಸದಾ ದೃಢವಾಗಿ ನಿಲ್ಲಲಿದೆ ಎಂಬ ಭರವಸೆಯನ್ನು ನೀಡಿದರು.

ಇಂದು ಲೋಕಾರ್ಪಣೆಗೊಂಡ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್‌ಗಳು ವೈಜ್ಞಾನಿಕ ತನಿಖೆಗೆ ವೇಗ ನೀಡಲಿದ್ದು, 75 ಬೊಲೆರೋ ವಾಹನಗಳು ಜಿಲ್ಲಾ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಲಿವೆ. “ಸಾರ್ವಜನಿಕರಲ್ಲಿ ನಿಮ್ಮ ಮೇಲೆ ಮತ್ತಷ್ಟು ವಿಶ್ವಾಸ ಮತ್ತು ಗೌರವ ಮೂಡುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ. ಈ ಹೊಸ ವಾಹನಗಳು ಅಪರಾಧಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಸಂಪೂರ್ಣ ಅನುಕೂಲ ಮಾಡಿಕೊಡಲಿ” ಎಂದು ಅಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್,ಗೃಹ ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಶ್ರೀ ರಿಜ್ವಾನ್‌ ಅರ್ಷದ್, ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾದ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

 


Share News