ಬೆಂಗಳೂರು: ನಾಡಿನ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಎಸ್ಪಿ ಬಿ.ಎನ್. ಲಾವಣ್ಯ (40) ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು (ಶನಿವಾರ) ಮಧ್ಯಾಹ್ನ ಸುಮಾರು 2:30ಕ್ಕೆ ಕೊನೆಯುಸಿರೆಳೆದರು.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದವರಾದ ಲಾವಣ್ಯ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ತಮ್ಮ ಸೇವಾವಧಿಯಲ್ಲಿ ಅವರು:
ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ (Addl. SP) ಆಗಿ ಕಾರ್ಯನಿರ್ವಹಿಸಿದ್ದರು.
ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ಮತ್ತು ಡಿಸಿಆರ್‌ಇ (DCRE) ವಿಭಾಗದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಬೆಸ್ಕಾಂ ವಿಜಿಲೆನ್ಸ್ ವಿಭಾಗದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಲಾವಣ್ಯ ಅವರು ಪತಿ, 10 ವರ್ಷದ ಪುತ್ರ ಹಾಗೂ 3 ವರ್ಷದ ಪುಟ್ಟ ಪುತ್ರಿಯನ್ನು ಅಗಲಿದ್ದಾರೆ. ಅಲ್ಪ ವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ಬಿಟ್ಟು ಇಹಲೋಕ ತ್ಯಜಿಸಿರುವುದು ಅವರ ಕುಟುಂಬದವರಲ್ಲಿ ಮತ್ತು ಇಡೀ ಪೊಲೀಸ್ ಇಲಾಖೆಯಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಲಾವಣ್ಯ ಅವರ ಅನಾರೋಗ್ಯದ ವಿಷಯ ತಿಳಿದು ಎರಡು ತಿಂಗಳ ಹಿಂದೆ DG&IGP ಡಾ. ಎಂ.ಎ. ಸಲೀಂ ಅವರು ವಿದ್ಯಾರಣ್ಯಪುರದಲ್ಲಿರುವ ಲಾವಣ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿ, ಕುಟುಂಬದವರಿಗೆ ಧೈರ್ಯ ತುಂಬಿದ್ದರು. ಆದರೆ ಇಂದು ಆ ಮೃತ್ಯುಂಜಯಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿನ ಕೌಗಿಲಿಗೆ ಶರಣಾಗಿದ್ದಾರೆ.
ತಮ್ಮ ವೃತ್ತಿಜೀವನದುದ್ದಕ್ಕೂ ಹಗಲಿರುಳು ನಾಡಿನ ಸೇವೆಗಾಗಿ ನಿಷ್ಠೆಯಿಂದ ದುಡಿದ ಓರ್ವ ದಕ್ಷ ಅಧಿಕಾರಿಯ ಅಗಲಿಕೆಗೆ ನಾಡಿನ ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.