Share News

ಹೊನ್ನಾವರ: ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಜೇನು ಸೊಸೈಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಯಲ್ಲಾಪುರದ ಯು.ಕೆ. ಸೌಹಾರ್ದ ಸಹಕಾರಿ ಬ್ಯಾಂಕಿನ ಹೊನ್ನಾವರ ಶಾಖೆಯಲ್ಲಿ ಭಾನುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮ್ಯಾನೇಜರ್ ಕ್ಯಾಬಿನ್ ಸುಟ್ಟು ಕರಕಲಾಗಿದ್ದರೂ, ಬ್ಯಾಂಕಿನ ಲಾಕರ್ ಹಾಗೂ ಪ್ರಮುಖ ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.

ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾ ವೈರಿಂಗ್‌ನಲ್ಲಿ ಉಂಟಾದ ತಾಂತ್ರಿಕ ದೋಷ (ಶಾರ್ಟ್ ಸರ್ಕ್ಯೂಟ್) ಬೆಂಕಿ ಹತ್ತಿಕೊಳ್ಳಲು ಕಾರಣ ಎನ್ನಲಾಗಿದೆ. ಕಟ್ಟಡದಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಬೆಂಕಿ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ವ್ಯಾಪಿಸುವುದು ತಪ್ಪಿದಂತಾಗಿದೆ.

ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಶಾಖಾ ವ್ಯವಸ್ಥಾಪಕರಾದ ಸುಭ್ರಾಯ ಭಟ್, “ಬೆಂಕಿಯು ಕೇವಲ ಮ್ಯಾನೇಜರ್ ಕ್ಯಾಬಿನ್‌ಗೆ ಮಾತ್ರ ಸೀಮಿತವಾಗಿತ್ತು. ಲಾಕರ್ ರೂಮ್‌ಗೆ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬ್ಯಾಂಕಿನ ಪ್ರಮುಖ ಕಾಗದ ಪತ್ರಗಳು, ಗ್ರಾಹಕರ ಹಣ ಮತ್ತು ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಹೀಗಾಗಿ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

​ಅವಘಡದ ಸಮಯದಲ್ಲಿ ತಕ್ಷಣವೇ ಸ್ಪಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲು ಸಹಕರಿಸಿದ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಬ್ಯಾಂಕ್ ವ್ಯವಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.


Share News