Share News

ಶ್ರೀರಂಗಪಟ್ಟಣ (ಮಂಡ್ಯ): ಹೆತ್ತ ತಾಯಿ ಸಣ್ಣ ವಿಷಯಕ್ಕೆ ಬೈದಿದ್ದಕ್ಕೆ ಮನನೊಂದ ಇಬ್ಬರು ಅಪ್ರಾಪ್ತ ಸಹೋದರಿಯರು ಭಾವುಕ ಡೆತ್‌ನೋಟ್ ಬರೆದಿಟ್ಟು ಮನೆಯಿಂದ ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ಮಕ್ಕಳ ಈ ನಿರ್ಧಾರದಿಂದ ಕಂಗಾಲಾಗಿರುವ ಪೋಷಕರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.

ಗ್ರಾಮದ ನಿವಾಸಿ ರಾಮಚಂದ್ರ ಎಂಬುವವರ ಮಕ್ಕಳಾದ ಸುಜಾತಾ (16) ಹಾಗೂ ರುಕ್ಮಿಣಿ (14) ಮನೆ ಬಿಟ್ಟು ಹೋಗಿರುವ ಅಪ್ರಾಪ್ತ ಸಹೋದರಿಯರು. ಮನೆಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ತಾಯಿ ಇಬ್ಬರು ಹೆಣ್ಣುಮಕ್ಕಳಿಗೆ ಬೈದು ಬುದ್ಧಿ ಹೇಳಿದ್ದರು ಎನ್ನಲಾಗಿದೆ. ಆದರೆ, ಇದರಿಂದ ತೀವ್ರ ಬೇಸರ ಮತ್ತು ಮನಸ್ತಾಪ ಮಾಡಿಕೊಂಡ ಬಾಲಕಿಯರು ಈ ಆತುರದ ನಿರ್ಧಾರಕ್ಕೆ ಕೈ ಹಾಕಿದ್ದಾರೆ.

ಮನೆ ಬಿಟ್ಟು ಹೋಗುವ ಮುನ್ನ ಸಹೋದರಿಯರಿಬ್ಬರು ಪೋಷಕರನ್ನುದ್ದೇಶಿಸಿ ಬರೆದಿಟ್ಟಿರುವ ಪತ್ರ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿದೆ.

​”ಅಮ್ಮ-ಅಪ್ಪ ಸ್ವಾರಿ.. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ನಮಗೆ ಆಗಲ್ಲ. ಹೀಗಾಗಿ ನಾವು ನಿಮ್ಮಿಂದ ತುಂಬಾ ದೂರ ಹೋಗಿ ಸಾಯುತ್ತೇವೆ…”

​ಎಂದು ಪತ್ರದಲ್ಲಿ ಬರೆದಿಟ್ಟು ಇಬ್ಬರೂ ನಾಪತ್ತೆಯಾಗಿದ್ದಾರೆ. ಹೆಣ್ಣುಮಕ್ಕಳು ಬರೆದಿಟ್ಟ ಕರಳು ಸೀಳುವಂತಹ ಈ ಮಾತುಗಳನ್ನು ಓದಿದ ಹೆತ್ತವರ ಕೈಕಾಲುಗಳು ನಡುಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಮಕ್ಕಳು ಕಾಣೆಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಆತಂಕಗೊಂಡ ಪೋಷಕರು ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿ, ಮಕ್ಕಳನ್ನು ಹುಡುಕಿಕೊಡುವಂತೆ ಕಣ್ಣೀರಿಟ್ಟು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಬಾಲಕಿಯರ ಮೊಬೈಲ್ ಲೊಕೇಶನ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹೆತ್ತವರು ಸಣ್ಣದಾಗಿ ಬೈದರೂ ಅಥವಾ ಬುದ್ಧಿ ಹೇಳಿದರೂ ಅದನ್ನು ಸಹಿಸಿಕೊಳ್ಳುವ ಶಕ್ತಿ ಇರುತ್ತಿಲ್ಲ. ಹೆತ್ತವರು ಬೈಯುವುದು ಮಕ್ಕಳ ಉಜ್ವಲ ಭವಿಷ್ಯ ಮತ್ತು ಒಳ್ಳೆಯದಕ್ಕಾಗಿಯೇ ಹೊರತು ಎಂದಿಗೂ ಕೆಟ್ಟದನ್ನು ಬಯಸುವುದಿಲ್ಲ. ಇಂತಹ ಆತುರದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಮಕ್ಕಳು ತಂದೆ-ತಾಯಿಯ ಪರಿಸ್ಥಿತಿಯನ್ನು ಒಮ್ಮೆ ಯೋಚಿಸಬೇಕಿದೆ. ನಾಪತ್ತೆಯಾಗಿರುವ ಆ ಇಬ್ಬರು ಸಹೋದರಿಯರು ಯಾವುದೇ ಅನಾಹುತ ಮಾಡಿಕೊಳ್ಳದೆ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಲಿ ಎಂಬುದೇ ಎಲ್ಲರ ಆಶಯವಾಗಿದೆ.

 


Share News