Share News

ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ 7 ರ ನಿವಾಸಿಯೊಬ್ಬರು 2025 ರ ಜುಲೈ 21 ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಜುಲೈ 22 ರಂದು ನೀಡಿದ ದೂರಿನ ಮೇರೆಗೆ ಪೊಲೀಸರು ಕಳವು ಪ್ರಕರಣ ದಾಖಲಿಸಿಕೊಂಡಿದ್ದರು.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ ಪೊಲೀಸರು, ಆಕ್ಸ್‌ಫರ್ಡ್ ಕಾಲೇಜು ಮೈದಾನದ ಬಳಿ ಕಳವು ಮಾಡಿದ್ದ ದ್ವಿಚಕ್ರ ವಾಹನದೊಂದಿಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದರು. ತೀವ್ರ ವಿಚಾರಣೆ ನಡೆಸಿದಾಗ ಆರೋಪಿಯು ಈ ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಎಚ್.ಎಸ್.ಆರ್.ಲೇಔಟ್, ವರ್ತೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ಒಟ್ಟು 10 ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಬಾಯಿಬಿಟ್ಟಿದ್ದಾನೆ.

ಆರೋಪಿ ನೀಡಿದ ಖಚಿತ ಮಾಹಿತಿ ಮೇರೆಗೆ ಎಚ್.ಎಸ್.ಆರ್.ಲೇಔಟ್ 1ನೇ ಸೆಕ್ಟರ್‌ನ ಮಿಲಿಟರಿ ಕಾಂಪೌಂಡ್ ಬಳಿ ಹಾಗೂ ಅಗರದ ಖಾಲಿ ಜಾಗದಲ್ಲಿ ಮಾರಾಟ ಮಾಡಲು ಬಚ್ಚಿಟ್ಟಿದ್ದ ಒಟ್ಟು 5.30 ಲಕ್ಷ ರೂಪಾಯಿ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಧ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ಬಂಧನದಿಂದ ಎಚ್.ಎಸ್.ಆರ್ ಲೇಔಟ್‌ನ 8 ಹಾಗೂ ವರ್ತೂರು ಮತ್ತು ಎಲೆಕ್ಟ್ರಾನಿಕ್ ಸಿಟಿಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 10 ಬೈಕ್ ಕಳ್ಳತನ ಪ್ರಕರಣಗಳು ಇತ್ಯರ್ಥಗೊಂಡಿವೆ.

ಆಗ್ನೇಯ ವಿಭಾಗದ ಡಿಸಿಪಿ ಶ್ರೀ. ಮೊಹಮ್ಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪವಿಭಾಗದ ಎಸಿಪಿ ಶ್ರೀ. ವಾಸುದೇವ ವಿಕೆ ಅವರ ನೇತೃತ್ವದಲ್ಲಿ ಎಚ್.ಎಸ್.ಆರ್ ಲೇಔಟ್ ಇನ್ಸ್‌ಪೆಕ್ಟರ್ ಶ್ರೀ. ಧರ್ಮೇಗೌಡ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News