Share News

ಬೆಂಗಳೂರು: ರಾಜಧಾನಿಯಲ್ಲಿ ಬ್ಲಾಕ್ ಸ್ಪಾಟ್ ತೆರವುಗೊಳಿಸಿದ ಸ್ಥಳದಲ್ಲೇ ಮತ್ತೆ ಅನಧಿಕೃತವಾಗಿ ಕಸ ಎಸೆದು, ದಂಡ ಪಾವತಿಸಲು ನಿರಾಕರಿಸಿದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಜುಲೈ 16, 2026 ರಂದು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ಡ್ ಮಾರ್ಷಲ್‌ಗಳು, ಸಾರ್ವಜನಿಕ ಸ್ಥಳದಲ್ಲಿ ನಾಲ್ವರು ಅನಧಿಕೃತವಾಗಿ ತ್ಯಾಜ್ಯ ಎಸೆಯುತ್ತಿರುವುದನ್ನು ಕಂಡು ತಡೆದು ನಿಯಮಾನುಸಾರ ದಂಡ ವಿಧಿಸಲು ಮುಂದಾಗಿದ್ದಾರೆ.

ಆದರೆ, ಕಸ ಎಸೆದ ಆ ನಾಲ್ವರು ದಂಡ ಪಾವತಿಸಲು ನಿರಾಕರಿಸಿದ್ದಲ್ಲದೆ, ತಂದಿದ್ದ ಕಸವನ್ನು ಅದೇ ಸ್ಥಳದಲ್ಲೇ ಬಿಸಾಡಿ ತೆರಳಿದ್ದಾರೆ.

​ಈ ಹಿನ್ನೆಲೆಯಲ್ಲಿ ಸರ್ವಜ್ಞನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೆದರಿಸಿದೆ.


Share News