ತಿರುವನಂತಪುರ/ವಯನಾಡ್: “ನಮ್ಮ ಕಥೆ ಮುಗಿಯಿತು ಎಂದೇ ನಾವು ಭಾವಿಸಿದ್ದೆವು. ಇದು ನಮ್ಮ ಪಾಲಿಗೆ ನಿಜವಾಗಿಯೂ ಪುನರ್ಜನ್ಮವೇ ಸರಿ…” – ವಯನಾಡ್ ಸಮೀಪದ ಕಲ್ಲಾಡಿ ಬಳಿ ಸಂಭವಿಸಿದ ಭೀಕರ ಮಣ್ಣು ಕುಸಿತದ ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಚಹಾ ತೋಟದ ಕಾರ್ಮಿಕ ಮಹಿಳೆ ಕೂಡಮ್ಮಾಳ್ (37) ಅವರ ಧ್ವನಿಯಲ್ಲಿನ್ನೂ ಆ ಭೀಕರತೆಯ ನಡುಕ ಎದ್ದು ಕಾಣುತ್ತಿತ್ತು.
ಜಿಲ್ಲೆಯಲ್ಲಿ ದಾಖಲೆಯ 26.5 ಸೆಂ.ಮೀ. ಮಳೆ ಸುರಿದ ಬೆನ್ನಲ್ಲೇ ಸಂಭವಿಸಿದ ಈ ದುರಂತದಲ್ಲಿ, ಪ್ರಕೃತಿ ವಿಕೋಪದ ಜೊತೆಗೆ ಗುತ್ತಿಗೆದಾರರ ಬೇಜವಾಬ್ದಾರಿತನವೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತಮಿಳುನಾಡು ಮೂಲದ ಕೂಡಮ್ಮಾಳ್ ಅವರು ಪತಿಯೊಂದಿಗೆ ಮೇಪ್ಪಾಡಿಗೆ ಹೊರಟಿದ್ದ ವೇಳೆ ಎದುರಾದ ಆ ಜವರಾಯನ ದರ್ಶನವನ್ನು ನೆನೆದು ಕಣ್ಣೀರಿಟ್ಟರು. “ಮಳೆಯ ಕಾರಣ ಚಹಾ ತೋಟಕ್ಕೆ ರಜೆ ಇತ್ತು. ದಿನಸಿ ತರಲು ಹೊರಟಿದ್ದೆವು. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಹಿಂತಿರುಗಿ ನೋಡಿದಾಗ ಮಣ್ಣು ಮಿಶ್ರಿತ ನೀರು ರಭಸವಾಗಿ ನಮ್ಮತ್ತ ನುಗ್ಗಿ ಬರುತ್ತಿತ್ತು. ನಾವು ಜೀವ ಉಳಿಸಿಕೊಳ್ಳಲು ಓಡಿದೆವು, ಅಷ್ಟರಲ್ಲೇ ಕೆಳಗೆ ಬಿದ್ದೆವು. ಇನ್ನು ಬದುಕುವುದಿಲ್ಲ ಅಂದುಕೊಂಡಿದ್ದೆವು” ಎಂದು ಸದ್ಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅವರು ಬಣ್ಣಿಸಿದರು.
ಸ್ಥಳದಲ್ಲಿದ್ದ ಟ್ಯಾಂಕರ್ ಲಾರಿಯೊಂದು ಹಲವು ಜನರೊಂದಿಗೆ ಮಣ್ಣಿನ ರಾಶಿಯಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯ ತೀವ್ರತೆಗೆ ಕನ್ನಡಿ ಹಿಡಿದಿದೆ.
ಈ ಭೀಕರ ಅವಘಡ ಕೇವಲ ಮಳೆಯಿಂದ ಆಗಿದ್ದಲ್ಲ, ಇದೊಂದು ‘ಮಾನವ ನಿರ್ಮಿತ ವಿಪತ್ತು’ ಎಂದು ನಾಯಕರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಆದೇಶ ಪಾಲಿಸದ ಗುತ್ತಿಗೆದಾರರು: ಕಾಮಗಾರಿ ಸ್ಥಳದಲ್ಲಿ ಸಂಗ್ರಹವಾಗಿದ್ದ ಭಾರಿ ಪ್ರಮಾಣದ ಮಣ್ಣನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜೂನ್ 20ರಂದೇ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಆದರೆ, ಗುತ್ತಿಗೆ ಕಂಪನಿ ಈ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಪ್ರಮುಖ ನಾಯಕರ ಆಕ್ರೋಶ: “ಮಳೆಯ ಮುನ್ಸೂಚನೆ ಸಿಗದಿರುವುದು ದುರಂತಕ್ಕೆ ಕಾರಣವಲ್ಲ, ಅಗೆದು ಹಾಕಿದ ಮಣ್ಣನ್ನು ಸಕಾಲದಲ್ಲಿ ತೆರವು ಮಾಡದಿರುವುದೇ ಅಸಲಿ ಕಾರಣ” ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ಇತ್ತ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಸಹ, “ಇದು ಮಾನವ ನಿರ್ಮಿತ ವಿಪತ್ತು, ಗುತ್ತಿಗೆ ಕಂಪನಿ ಇದಕ್ಕೆ ವಿವರಣೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ದುರಂತ ಸಂಭವಿಸಿದ ಕಲ್ಲಾಡಿ ಪ್ರದೇಶದಲ್ಲಿ ದೇಶದ 3ನೇ ಅತಿ ಉದ್ದದ 8.11 ಕಿ.ಮೀ. ಉದ್ದದ ‘ಅವಳಿ ಸುರಂಗ ಮಾರ್ಗ’ ಯೋಜನೆಯ ಕಾಮಗಾರಿ ನಡೆಯುತ್ತಿತ್ತು.
ಯೋಜನೆಯ ಉದ್ದೇಶ: ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರ ತಾಮರಶ್ಶೇರಿ ಘಾಟಿ ರಸ್ತೆಗೆ ಪರ್ಯಾಯವಾಗಿ ವಯನಾಡ್‌ನ ಮೇಪ್ಪಾಡಿ ಮತ್ತು ಕೋಯಿಕ್ಕೋಡ್‌ನ ಆನಕ್ಕಂಪೊಯಿಲ್ ನಡುವೆ ಈ ಸುರಂಗ ನಿರ್ಮಿಸಲಾಗುತ್ತಿತ್ತು. ಇದರಿಂದ ಎರಡು ಜಿಲ್ಲೆಗಳ ನಡುವಿನ ಅಂತರ 30 ಕಿ.ಮೀ ಹಾಗೂ ಪ್ರಯಾಣದ ಸಮಯ ಒಂದೂವರೆ ಗಂಟೆಯಷ್ಟು ಉಳಿತಾಯವಾಗುತ್ತಿತ್ತು.
ಪರಿಸರವಾದಿಗಳ ವಿರೋಧ ಇತ್ತು: ಇದು ಅತ್ಯಂತ ಸೂಕ್ಷ್ಮ ಪರಿಸರ ವಲಯ (Eco-Sensitive Zone) ಆಗಿರುವುದರಿಂದ ಯೋಜನೆ ಕೈಬಿಡಬೇಕೆಂದು ತಜ್ಞರ ಸಮಿತಿ ಮುನ್ನೆಚ್ಚರಿಕೆ ನೀಡಿತ್ತು ಹಾಗೂ ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ತಜ್ಞರ ಸಮಿತಿಯ ಕೆಲವು ಷರತ್ತುಬದ್ಧ ಒಪ್ಪಿಗೆಯನ್ನು ಆಧರಿಸಿ ಕೋರ್ಟ್ ಯೋಜನೆಗೆ ತಡೆ ನೀಡಲು ನಿರಾಕರಿಸಿತ್ತು.
ಯೋಜನೆಗೆ ಚಾಲನೆ: ಎಲ್‌ಡಿಎಫ್ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳೆದ ವರ್ಷ ಆಗಸ್ಟ್ 31ರಂದು ಈ ವಿವಾದಿತ ಯೋಜನೆಗೆ ಚಾಲನೆ ನೀಡಿದ್ದರು.