ಮೈಸೂರು: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವಂತೆ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಮೈಸೂರಿನಲ್ಲಿ ವಿಶೇಷ ಜಾಗೃತಿ ಮೂಡಿಸಲಾಯಿತು.
ನಗರದ ಶ್ರೀರಾಂಪುರ ಮಾರುಕಟ್ಟೆ ಪ್ರದೇಶದಲ್ಲಿ ಕ್ಷೇಮಧಾಮ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ ತರಕಾರಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‌ನ ಪದಾಧಿಕಾರಿಗಳು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಮನುಷ್ಯರ ಆರೋಗ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಎಚ್ಚರಿಸಿದರು. ಪ್ಲಾಸ್ಟಿಕ್‌ನಿಂದ ಮಣ್ಣಿನ ಫಲವತ್ತತೆ ಕುಸಿಯುವುದು ಮಾತ್ರವಲ್ಲದೆ, ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ಲಾಸ್ಟಿಕ್ ವಿಘಟನೆಯಾಗುವಾಗ ಬಿಡುಗಡೆಯಾಗುವ ವಿಷಕಾರಿ ರಾಸಾಯನಿಕಗಳಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹರಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಅಭಿಯಾನದಲ್ಲಿ ಕ್ಷೇಮಧಾಮ ಟ್ರಸ್ಟ್ ಅಧ್ಯಕ್ಷರಾದ ಶೇಖರ್, ಕಾರ್ಯದರ್ಶಿ ಎಚ್.ವಿ.ಎಲ್.ಎನ್. ಆಚಾರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಉಪಸ್ಥಿತರಿದ್ದರು.
ಅಲ್ಲದೆ, ಮೈಸೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಅಶ್ವಥ್, ಲಯನ್ ನಾಗೇಶ್ ಮೂರ್ತಿ, ಬಿಜೆಪಿ ಮುಖಂಡರಾದ ದೊರೆರಾಜಣ್ಣ, ಸತೀಶ್, ರಾಮಲಿಂಗ, ಮಂಜುನಾಥ್, ವಿಹಾ ಎಸ್. ಆಚಾರ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಮೈಸೂರಿಗಾಗಿ ಕರೆ ನೀಡಿದರು.