ಬಳ್ಳಾರಿ: ಬಡವರಿಗೆ ವಿತರಿಸಬೇಕಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು (Ration Rice) ಅಕ್ರಮವಾಗಿ ಸಾಗಿಸುತ್ತಿದ್ದ ಜಾಲದ ಮೇಲೆ ಕುರಗೋಡು ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ಬರೋಬ್ಬರಿ 5.52 ಲಕ್ಷ ರೂಪಾಯಿ ಮೌಲ್ಯದ ಅಕ್ಕಿಯನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಬಳಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಬಾದನಹಟ್ಟಿ ಗ್ರಾಮದ ಬಳಿ ಇರುವ ಲೇಔಟ್ ಒಂದರಲ್ಲಿ ಖದೀಮರು ಮೊದಲು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು. ಬಳಿಕ ಆ ಅಕ್ಕಿಯನ್ನು ಹೊರರಾಜ್ಯಕ್ಕೆ ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಲಾರಿಗೆ ಲೋಡ್ ಮಾಡಿಕೊಂಡು ಸಾಗಿಸಲು ಯತ್ನಿಸುತ್ತಿದ್ದರು. ಈ ಕುರಿತು ಕುರಗೋಡು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ, ಲಾರಿ ಸಮೇತ ಅಕ್ಕಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅಕ್ರಮ ಅಕ್ಕಿ ದಂಧೆಯ ನೇತೃತ್ವ ವಹಿಸಿದ್ದ ಯರ್ರಿಸ್ವಾಮಿ ಮತ್ತು ಉಮಾಶಂಕರ ಎಂಬುವವರ ವಿರುದ್ಧ ಕುರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ತಪ್ಪಿಸಿಕೊಂಡಿರುವ ದಂಧೆಕೋರರ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.
ಸಾರ್ವಜನಿಕರ ಅನ್ನವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಂಡ ಕುರಗೋಡು ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.