Share News

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ ವಸ್ತುಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಕ್ರಮ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಸ್ಫೋಟಿಸಲು ಈ ದುಷ್ಕೃತ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ.

ಜೂನ್ 4 ರ ತಡರಾತ್ರಿ ಅವಲಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಾಡಿಕೆಯಂತೆ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಯಾರಪ್ಪನಹಳ್ಳಿಯ ವಿಧಾನ ಸೌಧ ಲೇಔಟ್ ಬಳಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿರುವ ಬಗ್ಗೆ ಪಕ್ಕಾ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ‘ವೆಂಕಟೇಶ್ವರ ಗ್ರಾನೈಟ್ಸ್’ ಎಂಬ ಕಂಪನಿಯ ಹೆಸರಿನಲ್ಲಿ ಯಾವುದೇ ಪ್ರಾಧಿಕಾರದ ಅನುಮತಿ ಅಥವಾ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಕಲ್ಲಿನ ಕ್ವಾರಿ ನಡೆಸುತ್ತಿರುವುದು ಪತ್ತೆಯಾಗಿದೆ.

ಕ್ವಾರಿ ಜಾಗದಲ್ಲಿ ಕಲ್ಲುಗಳನ್ನು ಸ್ಫೋಟಿಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು ಹಾಗೂ ಅವುಗಳಿಗೆ ಬಳಸುವ ವೈಯರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಜನವಸತಿ ಪ್ರದೇಶದ ಸಮೀಪದಲ್ಲೇ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಇಟ್ಟಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು.

​ಈ ಅಕ್ರಮ ಸ್ಫೋಟಕ ಸಂಗ್ರಹ ಹಾಗೂ ಕ್ವಾರಿ ದಂಧೆಗೆ ಸಂಬಂಧಿಸಿದಂತೆ ಅವಲಹಳ್ಳಿ ಪೊಲೀಸರು ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ವಾರಿ ಮಾಲೀಕರು ಹಾಗೂ ಕೃತ್ಯದಲ್ಲಿ ಭಾಗಿಯಾದ ವೆಂಕಟರಮಣ ರೆಡ್ಡಿ, ಲೋಕೇಶ್ ರೆಡ್ಡಿ, ವಿಕಾಸ್, ತೋಹಿದ್ ಮತ್ತು ಸಂದೀಪ್ ಎಂಬ ಐದು ಮಂದಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪೊಲೀಸರ ಈ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

 


Share News