Share News

*ಜಾಗೃತ ಸ್ನೇಹಿತ ಮತ್ತು ಬೇಗೂರು ಪೊಲೀಸರ ಮಿಂಚಿನ ಕಾರ್ಯಾಚರಣೆ, ವಾಟ್ಸ್‌ಆಪ್ ಸ್ಟೇಟಸ್ ನೋಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ, ನಮ್ಮ-112 ತುರ್ತು ಸೇವೆಯ ದಕ್ಷತೆಗೆ ಸಾಕ್ಷಿಯಾದ ಮಾನವೀಯ ಘಟನೆ*

ಸಿಲಿಕಾನ್ ಸಿಟಿಯ ಪೊಲೀಸರು ಮತ್ತೊಮ್ಮೆ ತಮ್ಮ ಸಮಯಪ್ರಜ್ಞೆ ಮತ್ತು ಕರ್ತವ್ಯದಕ್ಷತೆಯನ್ನು ಮೆರೆಯುವ ಮೂಲಕ ಅಮೂಲ್ಯ ಜೀವವೊಂದನ್ನು ಉಳಿಸಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಂದಹಾಗೆ ಇದೇ ಏಪ್ರಿಲ್ 8ರಂದು ಸಂಜೆ ಗಾರೇಭವಿಪಾಳ್ಯದ ಮುನಿರೆಡ್ಡಿ ಲೇಔಟ್‌ನಲ್ಲಿ ವಾಸವಿದ್ದ 28 ವರ್ಷದ ಯುವಕನೊಬ್ಬ ತನ್ನ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ “Today is my last day” ಎಂದು ಬರೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಆತನ ಸ್ನೇಹಿತ ತಕ್ಷಣವೇ ಕಾರ್ಯಪ್ರವೃತ್ತನಾಗಿ “ನಮ್ಮ-112” ತುರ್ತು ಸಹಾಯವಾಣಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ನಮ್ಮ-112 ಸಿಬ್ಬಂದಿಯು ಬೇಗೂರು ಪೊಲೀಸ್ ಠಾಣೆಯ “ಹೊಯ್ಸಳ-215″ರಲ್ಲಿದ್ದ ಸಿಬ್ಬಂದಿಗೆ ಸಂದೇಶ ರವಾನಿಸಿದರು. ಅಂದು ಕರ್ತವ್ಯದಲ್ಲಿದ್ದ ಎಎಸ್‌ಐ ಶ್ರೀ. ಸತೀಶ್ ಕುಮಾರ್ ಹಾಗೂ ಪಿಸಿ ಶ್ರೀ. ಶಬೀರ್ ಮಧಾಪುರ ಅವರು ಕೇವಲ 4 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಕೂಡಲೇ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನನ್ನು ತಕ್ಷಣವೇ ಹತ್ತಿರದ ಜಯಶ್ರೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಆತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯು ಜಾಗೃತ ನಾಗರಿಕರ ಜವಾಬ್ದಾರಿ ಮತ್ತು ಬೆಂಗಳೂರು ನಗರ ಪೊಲೀಸರ ಮಾನವೀಯ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ. ಸರಿಯಾದ ಸಮಯಕ್ಕೆ ಲಭ್ಯವಾದ ಸಹಾಯವು ಹೇಗೆ ಜೀವ ಹಾನಿಯನ್ನು ತಡೆಯಬಲ್ಲದು ಎಂಬುದಕ್ಕೆ ಈ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News