Share News

ಪಾವಗಡ: ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಬೀದಿ ನಾಯಿಗಳ ಗುಂಪೊಂದು ಕುರಿಗಳ ಹಿಂಡಿನ ಮೇಲೆ ದಾಳಿ ನಡೆಸಿದ ಪರಿಣಾಮ ಸುಮಾರು 20 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಗ್ರಾಮದ ನಿವಾಸಿ ವೆಂಕಟೇಶ್ (ನಾರಾಯಣಪ್ಪ ಅವರ ಪುತ್ರ) ಎಂಬುವವರಿಗೆ ಸೇರಿದ ಕುರಿಗಳ ಮೇಲೆ ಈ ದಾಳಿ ನಡೆದಿದೆ. ಪ್ರತಿದಿನದಂತೆ ವೆಂಕಟೇಶ್ ಅವರು ತಮ್ಮ ಜಮೀನಿನಲ್ಲಿ ಕುರಿಗಳನ್ನು ಕಟ್ಟಿಹಾಕಿದ್ದರು. ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಜಮೀನಿಗೆ ನುಗ್ಗಿದ ಹತ್ತಾರು ಬೀದಿ ನಾಯಿಗಳ ಗುಂಪು ಏಕಾಏಕಿ ಕುರಿಗಳ ಮೇಲೆರಗಿವೆ. ನಾಯಿಗಳ ಭೀಕರ ಹಲ್ಲೆಯಿಂದಾಗಿ ಸ್ಥಳದಲ್ಲೇ 20 ಕುರಿಗಳು ಪ್ರಾಣಬಿಟ್ಟಿವೆ.

ತಮ್ಮ ಜೀವನೋಪಾಯಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ವೆಂಕಟೇಶ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತ್ತ ಕುರಿಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿದ್ದು, ಕುಟುಂಬಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಘಟನಾ ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಮೃತಪಟ್ಟ ಕುರಿಗಳನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರೆ.

ಕ್ಯಾತಗಾನಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಈಗ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಕುರಿಗಾಹಿಗಳಲ್ಲಿ ಮತ್ತು ಪೋಷಕರಲ್ಲಿ ಭೀತಿ ಹುಟ್ಟಿಸಿದೆ. “ಇಂದು ಕುರಿಗಳ ಮೇಲೆ ದಾಳಿ ಮಾಡಿದ ನಾಯಿಗಳು ನಾಳೆ ಸಣ್ಣ ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು ಮತ್ತು ನಷ್ಟ ಅನುಭವಿಸಿದ ಕುರಿಗಾಹಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Share News