Share News

ಗುನಾ (ಮಧ್ಯಪ್ರದೇಶ): ಹೆಣ್ಣೊಬ್ಬಳು ಮತ್ತೊಬ್ಬ ಹೆಣ್ಣಿನ ರಕ್ಷಣೆಗೆ ನಿಲ್ಲಬೇಕಾದ ಜಾಗದಲ್ಲಿ, ತನ್ನ ಪತಿಯ ಕಾಮದಾಹಕ್ಕೆ ಯುವತಿಯನ್ನು ಬಲಿಗೊಟ್ಟು ಪತ್ನಿಯೇ ಕಾವಲು ಕಾಯುತ್ತಿದ್ದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬ್ಯೂಟಿ ಪಾರ್ಲರ್ ತರಬೇತಿಯ ನೆಪದಲ್ಲಿ ಯುವತಿಯನ್ನು ಮನೆಗೆ ಕರೆಸಿಕೊಂಡು ಈ ಕೃತ್ಯ ಎಸಗಲಾಗಿದೆ.

ಆರೋಪಿ ಮಹಿಳೆ ಯಾಸ್ಮೀನ್ ಖಾನ್ ಬ್ಯೂಟಿ ಪಾರ್ಲರ್ ತರಬೇತಿ ನೀಡುವ ನೆಪದಲ್ಲಿ ಸಂತ್ರಸ್ತ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಯುವತಿ ಮನೆಗೆ ಬಂದಾಗ ಯಾಸ್ಮೀನ್ ತನ್ನ ಪತಿ ಶರೀಫ್ ಖಾನ್ ಮೂಲಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಸಂಪೂರ್ಣ ಸಹಕಾರ ನೀಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೊದಲ ಬಾರಿ ದೌರ್ಜನ್ಯ ನಡೆದಾಗ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಶರೀಫ್ ಯುವತಿಗೆ ಬೆದರಿಕೆ ಹಾಕಿದ್ದನು.

ಯುವತಿಯ ಹೇಳಿಕೆಯ ಪ್ರಕಾರ, ಈ ಘಟನೆಯ ನಂತರ ಯಾಸ್ಮೀನ್ ಹಲವು ಬಾರಿ ಬಲವಂತವಾಗಿ ಆಕೆಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಪತಿ ಶರೀಫ್ ಕೋಣೆಯೊಳಗೆ ಯುವತಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ, ಪತ್ನಿ ಯಾಸ್ಮೀನ್ ಯಾರೂ ಬರದಂತೆ ಹೊರಗೆ ಕಾವಲು ಕಾಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ವಿಕೃತಿ ತಣಿಸಲು ಪತ್ನಿಯೇ ಈ ರೀತಿ ಸಹಕರಿಸುತ್ತಿದ್ದುದು ತನಿಖೆಯಲ್ಲಿ ಬಯಲಾಗಿದೆ.

ಕಳೆದ ಶನಿವಾರ ಮತ್ತೆ ಬೆದರಿಕೆ ಹಾಕಿ ಯುವತಿಯನ್ನು ಮನೆಗೆ ಕರೆಸಿಕೊಂಡಾಗ, ಯುವತಿ ತೀವ್ರವಾಗಿ ಪ್ರತಿರೋಧ ತೋರಿದ್ದಾಳೆ. ಈ ವೇಳೆ ನಡೆದ ಗಲಾಟೆಯನ್ನು ಗಮನಿಸಿ ಯುವತಿಯ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಆರೋಪಿ ದಂಪತಿ ಪರಾರಿಯಾಗಲು ಯತ್ನಿಸಿದರಾದರೂ, ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

​ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸಮಾಜದಲ್ಲಿ ನಂಬಿಕೆಗೆ ದ್ರೋಹ ಬಗೆದು ನಡೆಯುತ್ತಿರುವ ಇಂತಹ ಘಟನೆಗಳು ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿವೆ.


Share News