ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಈಶಾನ್ಯ ವಿಭಾಗದ ವ್ಯಾಪ್ತಿಯ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರು (ACP) ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳೊಂದಿಗೆ ಎನ್‌ಡಿಪಿಎಸ್ (NDPS – ಮಾದಕ ವಸ್ತು ನಿಯಂತ್ರಣ ಕಾಯ್ದೆ) ಪ್ರಕರಣಗಳ ಪ್ರಮುಖ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
ಈ ಉನ್ನತ ಮಟ್ಟದ ಸಭೆಯಲ್ಲಿ, ಈಶಾನ್ಯ ವಿಭಾಗದಲ್ಲಿ ಸದ್ಯ ದಾಖಲಾಗಿರುವ ಎನ್‌ಡಿಪಿಎಸ್ ಪ್ರಕರಣಗಳ ತನಿಖೆಯ ಪ್ರಗತಿ, ಕಡತಗಳ ಸಮರ್ಪಕ ನಿರ್ವಹಣೆ ಹಾಗೂ ತನಿಖೆಯ ವಿವಿಧ ಹಂತಗಳ ಕುರಿತು ಸವಿಸ್ತಾರವಾಗಿ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ವಿಶೇಷ ಕಾರ್ಯಾಚರಣೆ: ಮಾದಕ ವಸ್ತುಗಳ ಮಾರಾಟ, ಸಾಗಾಟ, ಸಂಗ್ರಹಣೆ ಹಾಗೂ ವಿತರಣ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಾಲದ ವಿರುದ್ಧ ನಿರಂತರವಾಗಿ ಕಟ್ಟುನಿಟ್ಟಿನ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಮಾಹಿತಿ ಜಾಲ ಬಲವರ್ಧನೆ: ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು.
ಕಠಿಣ ಕ್ರಮ: ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಮಾದಕ ವಸ್ತುಗಳ ಜಾಲವನ್ನು ನಗರದಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕಠಿಣ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಯಿತು.
ಇದೇ ಸಂದರ್ಭದಲ್ಲಿ, ಮುಂಬರುವ ದಿನಗಳಲ್ಲಿ ಖುದ್ದು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ದಾಖಲಾಗಿರುವ ಎನ್‌ಡಿಪಿಎಸ್ ಪ್ರಕರಣಗಳ ಪ್ರಗತಿ ಹಾಗೂ ತನಿಖೆಯ ಗುಣಮಟ್ಟದ ಕುರಿತು ಸಮಗ್ರವಾದ ಪರಿಶೀಲನೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.