ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶಿವಮೊಗ್ಗದಲ್ಲಿ ಕಳೆದ ಹತ್ತು ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ತೀರ್ಥಹಳ್ಳಿಯ ಪ್ರತಿಭೆ ಅಶ್ವಲ್ ಜಾನ್ಸನ್ ಅರೋಜ ಅವರು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಹಾಗೂ ಟೀಮ್ ಲೀಡರ್ಶಿಪ್ ಬಹುಮಾನಗಳನ್ನು ಮುಡಿಗೇರಿಸಿಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಮಹಿಳೆಯರು ಸೇರಿದಂತೆ ಒಟ್ಟು ಸುಮಾರು ೪೫೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದ ಈ ವಿಶೇಷ ತರಬೇತಿ ಶಿಬಿರದಲ್ಲಿ ಅಶ್ವಲ್ ಜಾನ್ಸನ್ ಅರೋಜ ಅವರು ಆಂತರಿಕ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಜೊತೆಗೆ, ಶಿಬಿರದ ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ಟೀಮ್ ಲೀಡರ್ಶಿಪ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹತ್ತು ದಿನಗಳ ಕಾಲ ನಡೆದ ಈ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸುವ, ಗೌರವ ಸಲ್ಲಿಸುವ ಹಾಗೂ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸುವ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು.
ಶಿವಮೊಗ್ಗದ ಪೊಲೀಸ್ ಭವನದಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ (SP) ಜಿ.ಕೆ. ಮಿಥುನ್ ಕುಮಾರ್ ಅವರು ವಿಜೇತ ಅಶ್ವಲ್ ಜಾನ್ಸನ್ ಅವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್, ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸೋಮಶೇಖರಪ್ಪ, ಯುವರಾಜ್, ಪೊಲೀಸ್ ಇನ್ಸ್ಪೆಕ್ಟರ್ ಕೆ. ಟಿ. ಗುರುರಾಜ್, ತರಬೇತಿ ನೀಡಿದ ಎಆರ್ಎಸ್ಐ (ARSI) ಸುಭಾಷ್ ಚಂದ್ರ, ಮಹೇಶ ಎನ್. ಟಿ., ಕರಿಬಸವರಾಜು ಅರಸ್, ಪ್ರವೀಣ್ ಬಿ. ಎನ್., ಲಕ್ಷ್ಮೀಕಾಂತ, ರಾಘವೇಂದ್ರ, ವಿಜಯಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಹುಮಾನ ವಿಜೇತ ಅಶ್ವಲ್ ಜಾನ್ಸನ್ ಅರೋಜ ಅವರು ತೀರ್ಥಹಳ್ಳಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಲಿಯೋ ಅರೋಜಾ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಭಾರತಿ ದಂಪತಿಯ ಪುತ್ರನಾಗಿದ್ದಾರೆ. ಬಂದೂಕು ತರಬೇತಿ ಶಿಬಿರದಲ್ಲಿ ಅಪ್ರತಿಮ ಸಾಧನೆ ತೋರಿದ ಯುವಕನಿಗೆ ತೀರ್ಥಹಳ್ಳಿಯ ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಗಣೇಶ್ ಐತಾಳ್, ಮಂಡಗದ್ದೆ