ಹನೂರು: ಪಟ್ಟಣದ ಬಫರ್ ಝೋನ್ ವಲಯದ ಅಜ್ಜಿಪುರ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿ ಮುಂಭಾಗದಲ್ಲೇ ಕಿಡಿಗೇಡಿಗಳು ಶ್ರೀಗಂಧದ ಮರವನ್ನು ತುಂಡರಿಸಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯರಸ್ತೆ ಬದಿಯಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕತ್ತರಿಸಿ, ಕೊಂಬೆ-ರೆಂಬೆಗಳನ್ನು ಅಲ್ಲೇ ಬಿಸಾಡಿ ಮರದ ಮುಖ್ಯ ತುಂಡನ್ನು ಸಾಗಿಸಿದ್ದಾರೆ. ಅರಣ್ಯ ಇಲಾಖೆಯ ನರ್ಸರಿ ಕಚೇರಿಯ ಎದುರಲ್ಲೇ ಈ ಕಳ್ಳತನ ನಡೆದಿರುವುದು ಇಲಾಖೆಯ ಭದ್ರತಾ ಲೋಪ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಅರಣ್ಯ ಅಪರಾಧಗಳು:
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಕಳೆದ ತಿಂಗಳಷ್ಟೇ ಉಡುತೊರೆ ಜಲಾಶಯದ ಬಳಿ ಬೇಟೆಗಾರರು ಜಿಂಕೆಯನ್ನು ಬೇಟೆಯಾಡಿ, ಮೂರು ತುಂಡುಗಳಾಗಿ ಮಾಡಿ ಸಾಗಿಸುವ ವೇಳೆ ಅರಣ್ಯ ಸಿಬ್ಬಂದಿ ಕಂಡು ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಪಟ್ಟಣದ ಸಮೀಪವೇ ಶ್ರೀಗಂಧದ ಮರ ಕಳುವಾಗಿರುವುದು ಇಲಾಖೆಯ ವೈಫಲ್ಯವನ್ನು ಎತ್ತಿಹಿಡಿಯುತ್ತದೆ ಎಂದು ನಾಗರಿಕರು ಕಿಡಿಕಾರಿದ್ದಾರೆ.
ಬೆಲೆಬಾಳುವ ಮರಗಳು ಹಾಗೂ ವನ್ಯಜೀವಿಗಳ ರಕ್ಷಣೆಯಲ್ಲಿ ವಿಫಲವಾಗುತ್ತಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಶ್ರೀಗಂಧದ ಮರ ಕಳ್ಳತನ ಮಾಡಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅರಣ್ಯ ಪ್ರದೇಶದಲ್ಲಿ ಗಸ್ತು ಚುರುಕುಗೊಳಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
— ವರದಿ: ಶಾರುಕ್ ಖಾನ್, ಹನೂರು

Arakshakara Times Media
Related posts
