Share News

ಬನಶಂಕರಿಯಿಂದ ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿ.ಎಂ.ಟಿ.ಸಿ ಬಸ್ಸನ್ನು ಗೊಟ್ಟಿಗೆರೆ ಬಳಿ ಓವರ್‌ಟೇಕ್ ಮಾಡುವ ವಿಚಾರವಾಗಿ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಸಾರ್ವಜನಿಕ ರಸ್ತೆಯಲ್ಲೇ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು.

ಘಟನೆಯ ತೀವ್ರತೆಯನ್ನು ಅರಿತು ಹುಳಿಮಾವು ಪೊಲೀಸರು ಸ್ವಯಂ ಪ್ರೇರಿತ (suo motu) ದೂರು ದಾಖಲಿಸಿಕೊಂಡಿದ್ದರು. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ. ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶ್ರೀ. ಕೆ ಎಂ ಸತೀಶ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶ್ರೀ. ಜಗದೀಶ್ ಆರ್ ಮತ್ತು ತಂಡ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿತು.

ಈ ಸಂಬಂಧ ಬಿಲ್ವಾರದಹಳ್ಳಿಯ ಟಿಪ್ಪು ಸರ್ಕಲ್ ಬಳಿ ಓರ್ವ ಆರೋಪಿಯನ್ನು ಕೃತ್ಯಕ್ಕೆ ಬಳಸಿದ್ದ ಸ್ಪ್ಯಾನರ್ ಹಾಗೂ ದ್ವಿಚಕ್ರ ವಾಹನದೊಂದಿಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ ಆರೋಪಿಯು ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದರೊಟ್ಟಿಗೆ ಆರೋಪಿಯು ಕ್ಷಮೆ ಕೇಳಿರುವ ವಿಡಿಯೋ ಹುಳಿಮಾವು ಠಾಣಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News