Share News

ಬೆಂಗಳೂರು: ರಾಜಧಾನಿಯಲ್ಲಿ ಸಾರ್ವಜನಿಕರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ತಂಡವೊಂದನ್ನು ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಅಂದಾಜು ₹ 75,000 ಎಂದು ತಿಳಿದುಬಂದಿದೆ.

ದಿನಾಂಕ 01/03/2026ರಂದು ರಾತ್ರಿ 11 ಗಂಟೆ ಸುಮಾರಿಗೆ ಆಟೋ ಚಾಲಕರೊಬ್ಬರು ಇಂದಿರಾನಗರದಿಂದ ಪ್ರಯಾಣಿಕರನ್ನು ಬಿಟ್ಟು ಹಳೇ ಮದ್ರಾಸ್ ರಸ್ತೆ ಮೂಲಕ ಬರುತ್ತಿದ್ದಾಗ, ಮೂವರು ಅಪರಿಚಿತರು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ್ದರು. ಆಟೋ ಚಾಲಕನಿಗೆ ಹಲ್ಲೆ ನಡೆಸುತ್ತಿದ್ದಾಗ ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಸಹಚರರು ಸೇರಿ ಚಾಲಕನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ₹ 3,500 ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ವಿಕ್ರಮ್ ಆಮಟೆ (IPS) ಮತ್ತು ಹಲಸೂರು ಉಪ ವಿಭಾಗದ ಎಸಿಪಿ ಶ್ರೀ ರಂಗಪ್ಪ ಟಿ ರವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಶ್ರೀ ಕೆ. ಸಂತೋಷ್ ಅವರ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.

ದಿನಾಂಕ 14/03/2026 ರಂದು ಖಚಿತ ಮಾಹಿತಿ ಮೇರೆಗೆ ಹಲಸೂರು ಕೆರೆ ಬಳಿ ಮೂವರು ಆರೋಪಿಗಳು ಹಾಗೂ ಓರ್ವ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಯಿತು.

ವಿಚಾರಣೆ ವೇಳೆ ಆರೋಪಿಗಳು ಅಂದೇ ರಾತ್ರಿ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಆಟೋದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಹೊಡೆದು ಬೆಳ್ಳಿಯ ಚೈನ್ ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ.

ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


Share News