ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ (ಮೃಗಾಲಯ) ಆವರಣದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿರುವ ಘೋರ ಘಟನೆ ಸಂಭವಿಸಿದೆ.
ಮೃತರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮೂಲದ ಡಾ. ಸಮೀಕ್ಷಾ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗಷ್ಟೇ ತಾವರೆಕೊಪ್ಪ ಮೃಗಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಪಶುವೈದ್ಯೆಯಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಶುಕ್ರವಾರ ರಾತ್ರಿ ಸುಮಾರು 11:30 ಗಂಟೆಯ ಸಮಯದಲ್ಲಿ ಅನಾರೋಗ್ಯಕ್ಕೀಡಾಗಿದ್ದ ವನ್ಯಜೀವಿಯೊಂದಕ್ಕೆ ತುರ್ತು ಚಿಕಿತ್ಸೆ ನೀಡಲು ಅವರು ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ನೀರಾನೆಯು ಏಕಾಏಕಿ ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದೆ.
ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಡಾ. ಸಮೀಕ್ಷಾ ಅವರನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಇಂದು ಶನಿವಾರ ಮುಂಜಾನೆ ಸುಮಾರು 6:30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮರಾಕ್ಷರ ಅವರು ಮಾಹಿತಿ ನೀಡಿದ್ದಾರೆ.
ವನ್ಯಜೀವಿಗಳ ಮೇಲಿನ ಪ್ರೀತಿಯಿಂದ ಸೇವೆ ಸಲ್ಲಿಸಲು ಬಂದಿದ್ದ ಯುವ ವೈದ್ಯೆ, ಕರ್ತವ್ಯದ ಅವಧಿಯಲ್ಲೇ ಪ್ರಾಣ ಕಳೆದುಕೊಂಡಿರುವುದು ಮೃಗಾಲಯದ ಸಿಬ್ಬಂದಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ರಾತ್ರಿ ವೇಳೆಯಲ್ಲಿ ವನ್ಯಜೀವಿಗಳ ಚಿಕಿತ್ಸೆ ವೇಳೆ ಸುರಕ್ಷತಾ ಕ್ರಮಗಳ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ.
”ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಪ್ರತಿಭಾವಂತ ವೈದ್ಯೆಯನ್ನು ನಾವು ಕಳೆದುಕೊಂಡಿದ್ದೇವೆ. ಇದು ಇಲಾಖೆಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ,” ಎಂದು ಮೃಗಾಲಯದ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.