Share News

ಬೆಂಗಳೂರು: ರಾಜಧಾನಿಯ ಹಲವೆಡೆ ಕನ್ನ ಕಳವು ನಡೆಸುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಬಾಣಸವಾಡಿ ಠಾಣೆ ಪೊಲೀಸರು, ₹77.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿಯ ವಸ್ತುಗಳು, ₹3.04 ಲಕ್ಷ ನಗದು ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.

​ಬಂಧಿತರಿಂದ ಬಾಣಸವಾಡಿ, ಹೆಣ್ಣೂರು ಸೇರಿದಂತೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿವೆ.

​ಪ್ರಕರಣದ ಹಿನ್ನೆಲೆ:

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟ್‌ನ ನಿವಾಸಿಯೊಬ್ಬರು ಫೆಬ್ರವರಿ 13, 2026ರಂದು ಕುಟುಂಬ ಸಮೇತರಾಗಿ ಊಟಕ್ಕೆ ಹೊರಗಡೆ ತೆರಳಿದ್ದರು. ವಾಪಸ್ ಬಂದು ನೋಡಿದಾಗ ಮನೆಯ ಮುಂಬಾಗಿಲು ಮುರಿದು ಕೊಠಡಿಯಲ್ಲಿದ್ದ ₹14 ಲಕ್ಷ ನಗದಿದ್ದ ಬ್ಯಾಗ್ ಕಳವಾಗಿತ್ತು. ಈ ಕುರಿತು ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

​ಸುದೀರ್ಘ ತನಿಖೆ ಹಾಗೂ ಆರೋಪಿಗಳ ಬಂಧನ:

ಪ್ರಕರಣದ ಬೆನ್ನತ್ತಿದ ಪೊಲೀಸರು ಜುಲೈ 29, 2026ರಂದು ಕಲ್ಯಾಣನಗರ ಸರ್ವಿಸ್ ರಸ್ತೆಯ ಬಳಿ ಕಾರು ಹಾಗೂ ₹34 ಸಾವಿರ ನಗದು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ಸುದೀರ್ಘ ವಿಚಾರಣೆ ವೇಳೆ ಆರೋಪಿಗಳು ಬಾಣಸವಾಡಿ ಪ್ರಕರಣವಲ್ಲದೆ ನಗರದ ವಿವಿಧೆಡೆ ಕಳವು ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.

​ಆರೋಪಿಗಳನ್ನು 24 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು ನಡೆಸಿದ ವಿಚಾರಣೆ ಆಧರಿಸಿ:

​ವಿವಿಧ ಜ್ಯೂವೆಲ್ಲರಿ ಅಂಗಡಿಗಳಿಂದ 470 ಗ್ರಾಂ ಚಿನ್ನಾಭರಣ

​886 ಗ್ರಾಂ ಬೆಳ್ಳಿಯ ವಸ್ತುಗಳು

​ಆರೋಪಿಯ ಮನೆಯಿಂದ ₹2.70 ಲಕ್ಷ ನಗದು (ಒಟ್ಟು ನಗದು ₹3.04 ಲಕ್ಷ)

​ಕೃತ್ಯಕ್ಕೆ ಬಳಸಿದ್ದ 1 ಕಾರು ಸೇರಿದಂತೆ ಒಟ್ಟು ₹77.50 ಲಕ್ಷ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದೆ.

​7 ಪ್ರಕರಣಗಳು ಪತ್ತೆ:

ಆರೋಪಿಗಳ ಬಂಧನದಿಂದ ಬಾಣಸವಾಡಿ (2), ಹೆಣ್ಣೂರು (2), ಮೈಕೋ ಲೇಔಟ್ (1), ಮಾದನಾಯಕನಹಳ್ಳಿ (1) ಹಾಗೂ ಕೊಳ್ಳೇಗಾಲ ಟೌನ್ (1) ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 07 ಕಳವು ಪ್ರಕರಣಗಳು ಭೇದಿಸಲ್ಪಟ್ಟಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

​ಪೊಲೀಸ್ ತಂಡದ ಭರ್ಜರಿ ಕಾರ್ಯಾಚರಣೆ:

ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಅಮಟೆ (IPS) ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪವಿಭಾಗದ ಎಸಿಪಿ ಶ್ರೀಮತಿ ಅನುಷಾ ಜಿ. ನೇತೃತ್ವದಲ್ಲಿ, ಬಾಣಸವಾಡಿ ಇನ್ಸ್‌ಪೆಕ್ಟರ್ ಶ್ರೀ ಸುದರ್ಶನ್ ಹೆಚ್.ಸಿ. ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.


Share News