Share News

ಮೈಸೂರು: ಮನೆ ಮಾಲೀಕರು ಊರಿಗೆ ಹೋಗಿದ್ದನ್ನು ಬಂಡವಾಳ ಮಾಡಿಕೊಂಡು ಬಾಡಿಗೆಗಿದ್ದ ದಂಪತಿಯೇ ಸೇರಿ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಕಲ್ಯಾಣಿ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಡೆದಿದೆ.

​ಮನೆ ಮಾಲೀಕರ ನಂಬಿಕೆಗೆ ದ್ರೋಹ ಬಗೆದು ಕಳ್ಳತನ ಮಾಡಿದ್ದ ಬಾಡಿಗೆದಾರರಾದ ಮಂಜುನಾಥ್ ಮತ್ತು ನಯನ ಎಂಬ ದಂಪತಿಯನ್ನು ಪೊಲೀಸರು ಜೂನ್ 21ರಂದು ಬಂಧಿಸಿದ್ದಾರೆ.

ಆವರ್ತಿ ಗ್ರಾಮದ ನಿವೃತ್ತ ಶಿಕ್ಷಕ ನಾಗಯ್ಯ ಹಾಗೂ ಮಂಜುಳಾ ದಂಪತಿಯ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಜೂನ್ 13 ರಂದು ಶಿಕ್ಷಕ ದಂಪತಿಗಳು ತಮ್ಮ ಮನೆಗೆ ಬೀಗ ಹಾಕಿ ವೈಯಕ್ತಿಕ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಬಾಡಿಗೆದಾರ ದಂಪತಿ, ಕೈಚಳಕ ತೋರಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಮನೆಯಿಂದ ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ಖಾಸಗಿ ಗೋಲ್ಡ್ ಲೋನ್ ಸಂಸ್ಥೆಯಾದ ‘ಅರ್ಟಿಕ್ ಗೋಲ್ಡ್ ಫೈನಾನ್ಸ್’ನಲ್ಲಿ ಅಡವಿಟ್ಟು ಹಾಗೂ ಮಾರಾಟ ಮಾಡಿ ಸುಮಾರು 6.8 ಲಕ್ಷ ರೂಪಾಯಿ ನಗದನ್ನು ಪಡೆದುಕೊಂಡಿದ್ದರು. ಬಳಿಕ ಈ ಬೃಹತ್ ಮೊತ್ತದ ಹಣವನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಊರಿನಿಂದ ವಾಪಸ್ ಬಂದ ನಿವೃತ್ತ ಶಿಕ್ಷಕ ದಂಪತಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಜೂನ್ 21ರಂದು ಬೈಲುಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಬೈಲುಕೊಪ್ಪ ಠಾಣೆ ಪೊಲೀಸರು, ಬಾಡಿಗೆದಾರರ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ದಂಪತಿಯ ಕಳ್ಳತನದ ಕೃತ್ಯ ಬಯಲಾಗಿದೆ. ಸದ್ಯ ಪೊಲೀಸರು ಮಂಜುನಾಥ್ ಹಾಗೂ ನಯನ ಜೋಡಿಯನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

 


Share News