ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಕಬಾಬ್ ಹಾಗೂ ಶವರ್ಮಾಗಳ ಗುಣಮಟ್ಟ ಪರಿಶೀಲಿಸಿ ಶಾಕ್ ನೀಡಿದ್ದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು, ಇದೀಗ ಸಾರ್ವಜನಿಕರ ದೈನಂದಿನ ಅವಶ್ಯಕತೆಯಾದ ಹಾಲಿನ ಗುಣಮಟ್ಟ ತಪಾಸಣೆಗೆ ಮುಂದಾಗಿದೆ. ರಾಜ್ಯದ ವಿವಿಧೆಡೆ ಹಾಲಿನ ಕಲಬೆರಕೆ ತಡೆಯುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ದಿಢೀರ್ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಗ್ರಾಹಕರಿಗೆ ಪೌಷ್ಟಿಕ ಹಾಗೂ ಸುರಕ್ಷಿತ ಹಾಲು ತಲುಪುತ್ತಿದೆಯೇ ಅಥವಾ ಹಾಲಿನಲ್ಲಿ ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕ ಹಾಗೂ ನೀರು ಕಲಬೆರಕೆಯಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಈ ವಿಶೇಷ ಡ್ರೈವ್ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಪ್ರಮುಖ ಹೆದ್ದಾರಿಗಳು ಹಾಗೂ ನಗರದ ಪ್ರವೇಶ ದ್ವಾರಗಳಲ್ಲಿ ಫೀಲ್ಡಿಗಿಳಿದ ಆಹಾರ ಸುರಕ್ಷತಾ ಇಲಾಖೆಯ ವಿಶೇಷ ಅಧಿಕಾರಿಗಳ ತಂಡಗಳು, ವಿವಿಧ ಡೈರಿ ಹಾಗೂ ಕಂಪನಿಗಳಿಗೆ ಹಾಲು ಸಾಗಿಸುತ್ತಿದ್ದ ಬೃಹತ್ ಕ್ಯಾಂಟರ್ ಹಾಗೂ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನಗಳಲ್ಲಿದ್ದ ಹಾಲಿನ ಮಾದರಿಗಳನ್ನು (ಸ್ಯಾಂಪಲ್ಸ್) ವೈಜ್ಞಾನಿಕವಾಗಿ ಸಂಗ್ರಹಿಸಲಾಗಿದೆ.
ಸಂಗ್ರಹಿಸಲಾದ ಎಲ್ಲಾ ಹಾಲಿನ ಮಾದರಿಗಳನ್ನು ಅತ್ಯಾಧುನಿಕ ತಪಾಸಣೆಗಾಗಿ ತಕ್ಷಣವೇ ಅಧಿಕೃತ ಆಹಾರ ಪ್ರಯೋಗಾಲಯಕ್ಕೆ (ಲ್ಯಾಬ್) ರವಾನಿಸಲಾಗಿದೆ. ಪ್ರಯೋಗಾಲಯದ ಸಂಪೂರ್ಣ ಪರೀಕ್ಷಾ ವರದಿಯು ಮುಂದಿನ ವಾರದೊಳಗೆ ಇಲಾಖೆಯ ಕೈಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಬ್ ವರದಿ ಬಂದ ಬಳಿಕ ಹಾಲಿನ ಅಸಲಿ ಗುಣಮಟ್ಟದ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ಒಂದು ವೇಳೆ ಹಾಲಿನಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಅಥವಾ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕರವಾದ ಯಾವುದೇ ರೀತಿಯ ಕಲಬೆರಕೆ ಅಂಶಗಳು ಪತ್ತೆಯಾದರೆ, ಸಂಬಂಧಪಟ್ಟ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಮೂಲಗಳು ಎಚ್ಚರಿಸಿವೆ.
ಆಹಾರ ಸುರಕ್ಷತಾ ಇಲಾಖೆಯು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಲಿನ ಡೈರಿಗಳು ಹಾಗೂ ಸಾಗಾಣಿಕೆ ಜಾಲದ ಮೇಲೆ ನಿರಂತರ ನಿಗಾ ವಹಿಸಿರುವುದು ಗ್ರಾಹಕ ವಲಯದಲ್ಲಿ ದೊಡ್ಡ ಮಟ್ಟದ ಭರವಸೆ ಮೂಡಿಸಿದೆ.
