ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 24.60 ಲಕ್ಷ ಮೌಲ್ಯದ 166 ಗ್ರಾಂ ಚಿನ್ನಾಭರಣ ಹಾಗೂ 480 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಮನೆ ಕನ್ನ ಕಳವು ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಬಾತ್ಮೀದಾರರಿಂದ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆಯ ವೇಳೆ ಆರೋಪಿಗಳು ನಂದಿನಿ ಲೇಔಟ್ ಠಾಣಾ ಸರಹದ್ದಿನ ಐದು ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಒಡವೆಗಳನ್ನು ಆರೋಪಿಗಳು ಶ್ರೀರಾಂಪುರದ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಹಾಗೂ ಕೆ.ಜಿ.ಎಫ್‌ನಲ್ಲಿರುವ ಚಿನ್ನ-ಬೆಳ್ಳಿ ಕೆಲಸ ಮಾಡುವ ಅಂಗಡಿಗಳಲ್ಲಿ ಮಾರಾಟ ಮಾಡಿದ್ದರು. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳುವಾಗಿದ್ದ ಎಲ್ಲಾ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಪ್ರಸ್ತುತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ಶ್ರೀ. ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಯಶವಂತಪುರ ಎಸಿಪಿ ಶ್ರೀಮತಿ. ಮೇರಿ ಶೈಲಜಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಶ್ರೀ. ಗಣಪತಿ ಆರ್ ಎಲ್ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್