Share News

ಮದುವೆ ಮನೆ ಹಾಗೂ ಕಲ್ಯಾಣ ಮಂಟಪಗಳಿಗೆ ಬರುವ ಸಾರ್ವಜನಿಕರನ್ನೇ ಗುರಿಯಾಗಿಸಿಕೊಂಡು ಮಕ್ಕಳ ಚಿನ್ನಾಭರಣ ಹಾಗೂ ವಾಹನಗಳನ್ನು ಕಳುವು ಮಾಡುತ್ತಿದ್ದ ಓರ್ವ ಅಂತರ ಜಿಲ್ಲಾ ಕಳ್ಳನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 42.38 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೇ 2025ರಲ್ಲಿ ಅರಮನೆ ಮೈದಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯೊಬ್ಬರ ಮಗಳ ಕುತ್ತಿಗೆಯಲ್ಲಿದ್ದ ಗೋಲ್ಡ್ ಪೆಂಡೆಂಟ್ ಹಾಗೂ ಚೈನ್ ಕಳುವಾಗಿತ್ತು. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸರು ಮಾರ್ಚ್ 7, 2026ರಂದು ಅರಮನೆ ಮೈದಾನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಈ ಬೃಹತ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ಕಲ್ಯಾಣ ಮಂಟಪಗಳಿಗೆ ನುಗ್ಗಿ ಅಲ್ಲಿ ಆಟವಾಡುತ್ತಿದ್ದ ಚಿಕ್ಕ ಮಕ್ಕಳನ್ನು ಸಲುಗೆಯಿಂದ ಮಾತನಾಡಿಸಿ, ಅವರ ಗಮನ ಬೇರೆಡೆ ಸೆಳೆದು ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ. ಕೇವಲ ಆಭರಣ ಮಾತ್ರವಲ್ಲದೆ, ಕಲ್ಯಾಣ ಮಂಟಪಗಳ ಹೊರಗೆ ನಿಲ್ಲಿಸುತ್ತಿದ್ದ ವಾಹನಗಳನ್ನು ಸಹ ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಅಂದ್ರಹಳ್ಳಿಯ ಆತನ ನಿವಾಸದಲ್ಲಿ ಬಚ್ಚಿಟ್ಟಿದ್ದ 132 ಗ್ರಾಂ ಚಿನ್ನಾಭರಣ, 1.20 ಲಕ್ಷ ನಗದು, 2 ಕಾರು ಹಾಗೂ 4 ದ್ವಿಚಕ್ರ ವಾಹನಗಳು, 7 ಮೊಬೈಲ್ ಫೋನ್‌ಗಳು ಮತ್ತು 2 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನಿಂದ ಸದಾಶಿವನಗರದ 3 ಪ್ರಕರಣಗಳು ಸೇರಿದಂತೆ ಜಾಲಹಳ್ಳಿ, ವರ್ತೂರು, ಬಾಗಲಗುಂಟೆ ಹಾಗೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಪ್ರಕರಣಗಳನ್ನು ಭೇದಿಸಲಾಗಿದೆ.

ಈ ಪ್ರಕರಣದ ಯಶಸ್ಸಿನಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶ್ರೀ. ಅಕ್ಷಯ್ ಎಂ. ಹಾಕೆ ಅವರ ಮಾರ್ಗದರ್ಶನ ಹಾಗೂ ಎಸಿಪಿ ಶ್ರೀ. ಬಿ ರಾಮಚಂದ್ರ ಅವರ ನೇತೃತ್ವದ ಜೊತೆಗೆ ಸದಾಶಿವನಗರದ ಇನ್ಸ್‌ಪೆಕ್ಟರ್ ಶ್ರೀ. ಪ್ರದೀಪ್ ಬಿ ಮತ್ತು ತಂಡದ ಅವಿರತ ಪ್ರಯತ್ನವಿದ್ದಿತು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News