Share News

ಎಚ್.ಬಿ.ಆರ್ ಲೇಔಟ್‌ನಲ್ಲಿರುವ ಕಂಪ್ಯೂಟರ್ ಬಿಡಿಭಾಗಗಳ ಅಂಗಡಿಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ ತಂದೆ ಮತ್ತು ಮಗನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 80 ಲಕ್ಷ ಮೌಲ್ಯದ 444 DDR(4) ರ‍್ಯಾಮ್‌ಗಳು, 279 ಎಸ್‌ಎಸ್‌ಡಿ ಹಾರ್ಡ್ ಡಿಸ್ಕ್‌ಗಳು ಹಾಗೂ 2,29,900 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಅಂಗಡಿಯ ಮಾಲೀಕರು ಮಧ್ಯರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೆಂಗಳೂರಿನ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ, ಕೆ.ಜಿ ಹಳ್ಳಿ ಉಪವಿಭಾಗದ ಉಸ್ತುವಾರಿ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಶ್ರೀನಿವಾಸ್ ರೆಡ್ಡಿ ಎನ್ ಟಿ ಅವರ ನೇತೃತ್ವದಲ್ಲಿ, ಗೋವಿಂದಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಕಿರಣ ಪಿ ಬಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದರಂತೆ ಸಿಸಿಟಿವಿ ಹಾಗೂ ಬಾತ್ಮೀದಾರರ ಮಾಹಿತಿ ಆಧಾರದ ಮೇಲೆ ಮೊದಲು ಮಗನನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದರು. ಆತ ನೀಡಿದ ಮಾಹಿತಿ ಮೇರೆಗೆ ಆತನ ತಂದೆಯನ್ನೂ ಸಹ ಬಂಧಿಸಲಾಯಿತು. ಆರೋಪಿಗಳು ಕಳವು ಮಾಡಿದ ಸೊತ್ತುಗಳನ್ನು ತಮ್ಮ ಅಂಗಡಿಯಲ್ಲೇ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News