Share News

ಮೈಸೂರು: ಸಾರ್ವಜನಿಕರ ಕಳೆದುಹೋದ ಹಾಗೂ ಕಳುವಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವ ಮೈಸೂರು ಜಿಲ್ಲಾ ಪೊಲೀಸ್ ಘಟಕವು ಬರೋಬ್ಬರಿ ₹35 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ರಿಕವರಿ ಮಾಡಿದೆ. ಇದರೊಂದಿಗೆ ಸಾರ್ವಜನಿಕರಿಗೆ ವಾಟ್ಸಾಪ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ವಂಚನೆ ಜಾಲದ ಮೂವರು ಪ್ರಮುಖ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಹಮ್ಮಿಕೊಂಡಿದ್ದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ವಿವರಗಳನ್ನು ಹಂಚಿಕೊಂಡರು.

ಮೈಸೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಅನ್ನು ಬಳಸಿಕೊಂಡು ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

​ಈ ಕಾರ್ಯಾಚರಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ ನಡೆಸಿ ಒಟ್ಟು ₹35 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 173 ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಅವರ ಸಮಕ್ಷಮದಲ್ಲಿ, ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಅವುಗಳ ಅಸಲಿ ವಾರಸುದಾರರಿಗೆ ಮರಳಿ ಹಸ್ತಾಂತರಿಸಲಾಯಿತು. ತಮ್ಮ ನೆಚ್ಚಿನ ಫೋನ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ಮೈಸೂರು ಜಿಲ್ಲಾ ಪೊಲೀಸರ ಕಾರ್ಯಕ್ಷಮತೆಗೆ ಮನಸಾರೆ ಧನ್ಯವಾದ ಅರ್ಪಿಸಿದರು.

ಕಳೆದ ಜನವರಿ 27 ರಂದು ಪಿರ್ಯಾದಿದಾರರೊಬ್ಬರು ಅಪರಿಚಿತ ವ್ಯಕ್ತಿಗಳು ತಮಗೆ ವಾಟ್ಸಾಪ್ (WhatsApp) ಮೂಲಕ ಸಂಪರ್ಕಿಸಿ ನಕಲಿ ಆಮಿಷಗಳನ್ನು ಒಡ್ಡಿ ಭಾರಿ ಮೊತ್ತದ ಹಣ ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

​ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ತಾಂತ್ರಿಕ ಸಾಕ್ಷ್ಯಾಧಾರಗಳ ಬೆನ್ನತ್ತಿ ಭರ್ಜರಿ ಬೇಟೆಯಾಡಿದೆ. ನಿರಂತರ ಕಾರ್ಯಾಚರಣೆ ನಡೆಸಿ ಮೂವರು (3) ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಮಹತ್ವದ ಪತ್ರಿಕಾಗೋಷ್ಠಿ ಹಾಗೂ ಮೊಬೈಲ್ ಹಸ್ತಾಂತರ ಕಾರ್ಯಕ್ರಮದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ (ASP) ಶ್ರೀ ಮಲ್ಲಿಕ್ ಸಿ. ರವರು ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ದಕ್ಷ ಡಿವೈಎಸ್ಪಿ ಶ್ರೀಕಾಂತ್ ಆರ್. ರವರು ಉಪಸ್ಥಿತರಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇಡೀ ತಂಡದ ಶ್ಲಾಘನೀಯ ಕಾರ್ಯವನ್ನು ಅಭಿನಂದಿಸಿದರು.

​ಇದೇ ವೇಳೆ ಮಾತನಾಡಿದ ಎಸ್ಪಿ ಅವರು, “ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಗೋಲ್ಡನ್ ಅವರ್ಸ್‌ನಲ್ಲಿ (1930) ಕರೆ ಮಾಡಿ ದೂರು ದಾಖಲಿಸಬೇಕು ಮತ್ತು ಮೊಬೈಲ್ ಕಳೆದುಹೋದರೆ ಕೂಡಲೇ ಕೆಎಸ್‌ಪಿ ಆ್ಯಪ್ ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಬೇಕು” ಎಂದು ಜಾಗೃತಿ ಮೂಡಿಸಿದರು.

 


Share News