ರಾಣೇಬೆನ್ನೂರು: ಸರ್ಕಾರದ ನಿಯಮಗಳನ್ನು ಅಕ್ಷರಶಃ ಗಾಳಿಗೆ ತೂರಿ, ಸಾರ್ವಜನಿಕರ ತೆರಿಗೆ ಹಣವನ್ನು ಹಾಡಹಗಲೇ ಲೂಟಿ ಮಾಡುತ್ತಿರುವ ಆಘಾತಕಾರಿ ಪ್ರಕರಣ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಹಣ ಈಗ ಖಾಸಗಿ ಜಮೀನಿನ ಪಾಲಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಕ್ಷೆಯಲ್ಲಿಲ್ಲ ರಸ್ತೆ, ಆದ್ರೂ ನಡೀತಿದೆ ಕಾಮಗಾರಿ!
ಗ್ರಾಮದ ಸರ್ವೆ ನಂ. 4/3 ರಲ್ಲಿರುವ ಸಾರ್ವಜನಿಕ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ನೆಪದಲ್ಲಿ ₹5 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಅಸಲಿ ವಿಷಯವೇನೆಂದರೆ ಸರ್ಕಾರದ ಅಧಿಕೃತ ಗ್ರಾಮ ನಕ್ಷೆಯಲ್ಲಿ ಈ ಜಾಗದಲ್ಲಿ ರಸ್ತೆಯೇ ಇಲ್ಲ!
ಪ್ರಸ್ತುತ ಕಾಮಗಾರಿ ನಡೆಯುತ್ತಿರುವುದು ರೈತರ ಖಾಸಗಿ ಕೃಷಿ ಜಮೀನಿನ ಮಧ್ಯಭಾಗದಲ್ಲಿ. ನಿಯಮದ ಪ್ರಕಾರ ಯಾವುದೇ ಕಾಮಗಾರಿ ನಡೆಸುವ ಮುನ್ನ ಸದರಿ ಜಾಗವು ಸರ್ಕಾರದ ಹೆಸರಿಗೆ ನೋಂದಣಿಯಾಗಿರಬೇಕು. ಆದರೆ ಇಲ್ಲಿ ಯಾವ ಕಾನೂನು ಪ್ರಕ್ರಿಯೆಯೂ ನಡೆದಿಲ್ಲ. ಕೇವಲ ಗುತ್ತಿಗೆದಾರರ ಲಾಭಕ್ಕಾಗಿ ನಕ್ಷೆಯಲ್ಲೇ ಇಲ್ಲದ ಜಾಗದಲ್ಲಿ ರಸ್ತೆ ನಿರ್ಮಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ಸಂಚು ಇದರ ಹಿಂದೆ ಅಡಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಅಕ್ರಮದ ಕುರಿತು ಸ್ಪಷ್ಟನೆ ಕೇಳಲು ಪತ್ರಿಕೆಯು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (PDO) ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕನಿಷ್ಠ ದೂರವಾಣಿ ಕರೆ ಸ್ವೀಕರಿಸುವ ಸೌಜನ್ಯವನ್ನೂ ತೋರುತ್ತಿಲ್ಲ. ಅಧಿಕಾರಿಗಳ ಈ ‘ಮೌನ’ ಮತ್ತು ‘ಬೇಜವಾಬ್ದಾರಿತನ’ ನೋಡಿದರೆ, ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತಿದೆ.
”ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಇಂತಹ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ.”
— ನಾಗರಾಜ ತಳವಾರ, ದೂರುದಾರರು.
ನಕ್ಷೆಯಿಲ್ಲದ ಜಾಗದಲ್ಲಿ ರಸ್ತೆ ನಿರ್ಮಿಸಿ ಸಾರ್ವಜನಿಕ ಹಣ ಲೂಟಿ ಮಾಡುತ್ತಿರುವುದನ್ನು ಉದಗಟ್ಟಿ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಕೂಡಲೇ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು, ಇಲ್ಲದಿದ್ದರೆ ಲೋಕಾಯುಕ್ತದ ಬಾಗಿಲು ತಟ್ಟುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರಶ್ನೆ ಉಳಿದಿರುವುದು ಇಷ್ಟೇ: ಜನರ ತೆರಿಗೆ ಹಣದ ದೋಚಾಟಕ್ಕೆ ಕಡಿವಾಣ ಬೀಳುತ್ತದೆಯೇ? ಅಥವಾ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಾ ಹೀಗೆ ಮೌನಕ್ಕೆ ಶರಣಾಗುತ್ತಾರೆಯೇ?