Share News

ಚನ್ನಪಟ್ಟಣ (ಎಂ.ಕೆ. ದೊಡ್ಡಿ): ಕಟ್ಟಡ ನಿರ್ಮಾಣಕ್ಕಾಗಿ ತಂದಿಡಲಾಗಿದ್ದ ಕಬ್ಬಿಣದ ಕಂಬಿಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಎಂ.ಕೆ. ದೊಡ್ಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಗಳಿಂದ ಸುಮಾರು ₹50,000/- ಮೌಲ್ಯದ 1 ಟನ್ ತೂಕದ ಕಬ್ಬಿಣದ ಕಂಬಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಜುಲೈ 20, 2026 ರಂದು ಎಂ.ಕೆ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದಗೆರೆ ಗ್ರಾಮದ ಬಳಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ತಂದಿಡಲಾಗಿದ್ದ ಕಬ್ಬಿಣದ ಕಂಬಿಗಳನ್ನು ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಸಂತ್ರಸ್ತ ದೂರುದಾರರು ನೀಡಿದ ದೂರಿನನ್ವಯ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ಸಂ: 89/2026, ಕಲಂ- 303(2) BNS) ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಎಂ.ಕೆ. ದೊಡ್ಡಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು, ಖಚಿತ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಬಂಧಿತರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ, ಅವರಿಂದ ಕಳವು ಮಾಡಲಾಗಿದ್ದ 1 ಟನ್ ತೂಕದ ಕಬ್ಬಿಣದ ಕಂಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಸಮರ್ಥವಾಗಿ ಕಾರ್ಯನಿರ್ವಹಿಸಿ ಕಳವು ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.


Share News