Share News

ನಂಜನಗೂಡು: ನಂಜನಗೂಡು – ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 60ಕ್ಕೂ ಹೆಚ್ಚು ಜಾನುವಾರುಗಳನ್ನು ದೊಡ್ಡಕವಲಂದೆ ಠಾಣೆ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಕಾರ್ಯಾಚರಣೆ ವೇಳೆ ಕ್ಯಾಂಟರ್ ಒಂದರ ಕ್ಲೀನರ್‌ನನ್ನು ಬಂಧಿಸಲಾಗಿದ್ದು, ಇಬ್ಬರು ಚಾಲಕರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

​ಮೈಸೂರು ಮೂಲದ ಸಯ್ಯದ್ ಜಾವೀದ್ (43) ಬಂಧಿತ ಕ್ಲೀನರ್.

ದೊಡ್ಡಕವಲಂದೆ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜು ಅವರ ನೇತೃತ್ವದಲ್ಲಿ ಸಿಬ್ಬಂದಿಯು ನಂಜನಗೂಡು – ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಾಲಾಗಿ ಬಂದ ಎರಡು ಕ್ಯಾಂಟರ್ (KA-01-AG-4796 ಹಾಗೂ KA-16-B-5714) ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಜಾನುವಾರುಗಳನ್ನು ಅತ್ಯಂತ ಕ್ರೂರವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ಪೊಲೀಸರ ತಪಾಸಣೆ ಕಂಡು ಗಾಬರಿಗೊಂಡ ಇಬ್ಬರು ಕ್ಯಾಂಟರ್ ಚಾಲಕರು ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಾಹನದಲ್ಲಿದ್ದ ಕ್ಲೀನರ್ ಸಯ್ಯದ್ ಜಾವೀದ್‌ನನ್ನು ವಶಕ್ಕೆ ಪಡೆದಿದ್ದಾರೆ.

​ವಾಹನಗಳಲ್ಲಿದ್ದ 60ಕ್ಕೂ ಹೆಚ್ಚು ಜಾನುವಾರುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಈ ಸಂಬಂಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಚಾಲಕರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.


Share News