ಮೂಡಿಗೆರೆ: ಸುರಿಯುವ ಮಳೆ, ಮೈ ಹೆಪ್ಪುಗಟ್ಟಿಸುವ ಚಳಿ ಮತ್ತು ಕಾಡು ಪ್ರಾಣಿಗಳ ಭೀತಿಯ ನಡುವೆ ಕಾಫಿ ಎಸ್ಟೇಟ್‌ನ ಹಳ್ಳದಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗೂರು ಎಸ್ಟೇಟ್‌ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ಮಧ್ಯಪ್ರದೇಶ ಮೂಲದ ಗೋನು ಮತ್ತು ಸೋನು ದಂಪತಿ ಕೆಲಸಕ್ಕಾಗಿ ವಾರದ ಹಿಂದಷ್ಟೇ ಕೆಳಗೂರು ಎಸ್ಟೇಟ್‌ಗೆ ಬಂದಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ಹೋಗಿದ್ದ ವೇಳೆ, ಇವರ ಎಂಟು ವರ್ಷದ ಹೆಣ್ಣು ಮಗು ಹಾಗೂ ಒಂದೂವರೆ ವರ್ಷದ ಶಿವಂ ಎಂಬ ಪುಟ್ಟ ಕಂದಮ್ಮ ಕಾಫಿ ತೋಟದ ಬಳಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಶಿವಂ ಎಂಬ ಮಗುವನ್ನು ರಸ್ತೆಯಲ್ಲೇ ಬಿಟ್ಟು ಬಾಲಕಿ ಮನೆಗೆ ಮರಳಿದ್ದಾಳೆ. ಸಂಜೆ ಪೋಷಕರು ಬಂದು ನೋಡಿದಾಗ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮಗು ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶ್ವಾನ ದಳ ಮತ್ತು ಸ್ಥಳೀಯರ ಸಹಾಯದೊಂದಿಗೆ ಕಾಫಿ ತೋಟದಾದ್ಯಂತ ತೀವ್ರ ಹುಡುಕಾಟ ಆರಂಭಿಸಿದರು. ಆದರೆ, ರಾತ್ರಿಯಿಡೀ ಸುರಿದ ಭಾರಿ ಮಳೆ ಮತ್ತು ದಟ್ಟವಾದ ಕತ್ತಲೆ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿತ್ತು. ಮಗುವಿನ ಸ್ಥಿತಿಯನ್ನು ನೆನೆದು ಪೋಷಕರ ಕ್ರಂದನ ಮುಗಿಲು ಮುಟ್ಟಿತ್ತು.
ಇಂದು ಮುಂಜಾನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ, ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಎಸ್ಟೇಟ್‌ನ ಹಳ್ಳವೊಂದರಲ್ಲಿ ಮಗು ಶಿವಂ ಪತ್ತೆಯಾಗಿದೆ. ಚಳಿಯಿಂದ ನಡುಗುತ್ತಿದ್ದ ಮಗುವನ್ನು ಕಂಡ ಗ್ರಾಮಸ್ಥರು ಮತ್ತು ಪೊಲೀಸರು ಕೂಡಲೇ ಮಗುವನ್ನು ಎತ್ತಿಕೊಂಡು ಸಾಂತ್ವನ ಹೇಳಿದ್ದಾರೆ. ಕಾಡು ಪ್ರಾಣಿಗಳ ಓಡಾಟವಿರುವ ಈ ಪ್ರದೇಶದಲ್ಲಿ ಮಗು ಸುರಕ್ಷಿತವಾಗಿ ಸಿಕ್ಕಿರುವುದು ಒಂದು ಪವಾಡವೇ ಸರಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. 12 ಗಂಟೆಗಳ ಕಾಲ ಆತಂಕದಲ್ಲಿದ್ದ ಪೋಷಕರು ಮಗುವನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರ ಸಮಯಪ್ರಜ್ಞೆ ಮತ್ತು ಕಾರ್ಯಾಚರಣೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.